

ರಾಯಚೂರು: ಅರಕೇರಾವನ್ನು ಕೇಂದ್ರವಾಗಿಸಿ ಹೊಸ ತಾಲೂಕು ರಚನೆಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿರುವುದು ಅವೈಜ್ಞಾನಿಕ. ಗಬ್ಬೂರನ್ನು ತಾಲೂಕು ಕೇಂದ್ರವನ್ನಾಗಿ ಮಾಡುವುದು ಸೂಕ್ತ ಎಂದು ಗಬ್ಬೂರು ತಾಲೂಕು ಹೋರಾಟ ಸಮಿತಿ ಸಂಚಾಲಕ ಬುಡ್ಡನಗೌಡ ಜಾಗಟಗಲ್ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಅರಕಾರಾ ತಾಲೂಕು ಕೇಂದ್ರವನ್ನಾಗಿ ಮಾಡುವುದರಿಂದ ಕೇವಲ 30 ಕಿ.ಮೀ. ವ್ಯಾಪ್ತಿಯಲ್ಲಿ ಮೂರು ತಾಲೂಕುಗಳು ರಚನೆಯಾದಂತಾಗುತ್ತದೆ. ಭೌಗೋಳಿಕವಾಗಿಯೂ ಸರಿಯಾದ ನಿರ್ಧಾರವಲ್ಲ. ಗಬ್ಬೂರು ತಾಲೂಕು ಕೇಂದ್ರವಾಗಲು ಸೂಕ್ತವಾಗಿದೆ.
ಶಾಸಕ ಕೆ.ಶಿವನಗೌಡ ನಾಯಕರು ರಾಜಕೀಯ ಸ್ವಾರ್ಥ ಲಾಭಕ್ಕಾಗಿ ಒತ್ತಡ ಹೇರಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ನಿರ್ಧಾರಕ್ಕೆ ಮುಂಚೆ ವಿವಿಧ ಪಕ್ಷಗಳ ಮುಖಂಡರೊಂದಿಗೂ ಚರ್ಚೆ ನಡೆಸದೆ ಏಕಪಕ್ಷೀಯವಾಗಿ ತೀರ್ಮಾನ ಕೈಗೊಂಡಿದ್ದಾರೆ. ಈ ಕುರಿತು ಕಾನೂನು ಹೋರಾಟ ನಡೆಸಲಾಗುವುದು ಎಂದು ಬುಡ್ಡನಗೌಡ ಜಾಗಟಗಲ್ ತಿಳಿಸಿದರು.
ಸಮಿತಿ ಪದಾಧಿಕಾರಿಗಳಾದ ಸದಾಶಿವಯ್ಯಸ್ವಾಮಿ, ಸುಗೂರಪ್ಪಗೌಡ ಗಬ್ಬೂರು, ಬಸವರಾಜ ಸಾಹುಕಾರ ಬೆಳಗುಂದಿ, ಶಂಕರಗೌಡ ನಾಡಗೌಡ, ಬೂದೆಯ್ಯಸ್ವಾಮಿ ಉಪಸ್ಥಿತರಿದ್ದರು.