

ದೇವದುರ್ಗ: ಅವೈಜ್ಞಾನಿಕವಾಗಿ ರಚನೆ ಮಾಡಿರುವ ಅರಕೇರಾ ತಾಲೂಕನ್ನು ರದ್ದುಮಾಡಬೇಕು. ಕೊತ್ತದೊಡ್ಡಿ ಗ್ರಾಪಂ ದೇವದುರ್ಗದಲ್ಲಿ ಉಳಿಸುವಂತೆ ಒತ್ತಾಯಿಸಿ ರಾಯಚೂರಿನ ಡಿಸಿ ಕಚೇರಿಯಲ್ಲಿ ಎಡಿಸಿ ಶಿವಾನಂದ ಭಜಂತ್ರಿಗೆ ವಿವಿಧ ಗ್ರಾಮಸ್ಥರು ಸೋಮವಾರ ಮನವಿ ಸಲ್ಲಿಸಿದರು.
ಜನರ ಭಾವನೆಗೆ ವಿರುದ್ಧವಾಗಿ ಅರಕೇರಾ ತಾಲೂಕು ರಚಿಸಿ 17 ಗ್ರಾಪಂಗಳನ್ನು ಸೇರಿಸಲಾಗಿದೆ. ದೇವದುರ್ಗಕ್ಕೆ ಸಮೀಪವಿರುವ ಹಳ್ಳಿಗಳನ್ನೂ ದೂರದ ಅರಕೇರಾಗೆ ಸೇರಿಸಲಾಗಿದೆ. ಸದ್ಯ 17ಗ್ರಾಪಂ ವ್ಯಾಪ್ತಿ ಎಲ್ಲ ಹಳ್ಳಿಗಳ ಕಂದಾಯ ಕೆಲಸಗಳು ಬಂದ್ ಆಗಿವೆ. ಇದರಿಂದ ಜನರು ಸಂಕಷ್ಟ ಎದುರಿಸುವಂತಾಗಿದೆ. ಅರಕೇರಾ ಯಾವುದೇ ಸೌಲಭ್ಯ ಹೊಂದಿಲ್ಲ ಎಂದು ದೂರಿದರು.
ಅರಕೇರಾ ತಾಲೂಕನ್ನು ರದ್ದುಮಾಡಿ, ಹೋಬಳಿಯಾಗಿ ಮುಂದುವರಿಸಬೇಕು. ಅಖಂಡ ದೇವದುರ್ಗ ತಾಲೂಕು ಉಳಿಸುವ ಜತೆಗೆ ಕೊತ್ತದೊಡ್ಡಿ ಸೇರಿ ಎಲ್ಲ 33 ಗ್ರಾಪಂ ಸೇರ್ಪಡೆ ಮಾಡಬೇಕು. ಕಂದಾಯ ಸಚಿವರು, ಮುಖ್ಯಮಂತ್ರಿಗೆ ಪತ್ರಬರೆದು ಸಮಸ್ಯೆ ಪರಿಹರಿಸಬೇಕು.
ನಿರ್ಲಕ್ಷಿಸಿದರೆ ಹೋರಾಟ ನಡೆಸುವ ಜತೆಗೆ ಮುಂಬರುವ ತಾಪಂ, ಜಿಪಂ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ಎಚ್ಚರಿಸಿದರು. ಅಖಂಡ ದೇವದುರ್ಗ ತಾಲೂಕು ಹೋರಾಟ ಸಮಿತಿ ಸಂಚಾಲಕ ಶಿವರಾಜ ನಾಯಕ, ಕೊತ್ತದೊಡ್ಡಿ ಗ್ರಾಪಂ ಅಧ್ಯಕ್ಷ ತಿಪ್ಪಣ್ಣ ಯಲದೊಡ್ಡಿ,
ಅರಕೇರಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರೇಶ್ ನಾಯಕ ಹೇಮನೂರು, ಪ್ರಮುಖರಾದ ಶಿವರಾಜ ಪೂಜಾರಿ, ಬಸವರಾಜ, ಮಲ್ಲು ಕೊತ್ತದೊಡ್ಡಿ, ಬಸವರಾಜ ವಕೀಲ ಹೇಮನೂರು, ದಸ್ತಗಿರಿಸಾಬ್, ಕೆಂಚಣ್ಣ ಪೂಜಾರಿ, ಹನುಮಂತರಾಯ ಗಾಲಿ, ಗೋವಿಂದರಾಜ ಚಿಕ್ಕಗುಡ್ಡ, ಹರ್ಷ ಮೇಟಿ, ತಾತಪ್ಪ ಮಸ್ಕಿ, ಹನುಮಂತ ಬಾವಿಮನಿ, ಗುರು ಟೈಲರ್ ಇತರರಿದ್ದರು.