

ಅರಕೇರಾ: ಪಟ್ಟಣದಲ್ಲಿ ಶ್ರೀ ಸೂಗೂರೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಸೋಮವಾರ ಸಂಜೆ ಹಿರೇಮಠದ ಶ್ರೀ ಚಂದ್ರಶೇಖರಯ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಶ್ರದ್ಧಾ ಭಕ್ತಿಯಿಂದ ಅದ್ದೂರಿಯಾಗಿ ನಡೆಯಿತು.
ಪುರವಂತರ ವಡವು-ವಚನಗಳು ಹಾಗೂ ನಂದಿಕೋಲು ಸೇವೆ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವಸ್ಥಾನದ ಕಳಸಗಳು ಹಾಗೂ ಪಲ್ಲಕ್ಕಿ ಮೆರವಣಿಗೆ ಮಾಡಲಾಯಿತು. ರಾತ್ರಿ 8.30ರ ವೇಳೆಗೆ ಸಹಸ್ರಾರು ಭಕ್ತ ಸಮೂಹದ ಮಧ್ಯೆ ಬಸವಣ್ಣನ ಕಟ್ಟೆವರೆಗೆ ಉತ್ಸವ ಸಾಗಿತು. ವಾದ್ಯ ಮೇಳಗಳೊಂದಿಗೆ ಭಾಗವಹಿಸಿದ ಗ್ರಾಮದ ಮಹಿಳೆಯರು ಕಳಸಗಳನ್ನು ಹಿಡಿದು ಉತ್ಸವಕ್ಕೆ ಮೆರುಗು ತಂದರು.
ಮಂಗಳವಾರ ಬೆಳಗ್ಗೆ 6ರಿಂದ 11ರವರೆಗೆ ದೇವಸ್ಥಾನದ ಸುತ್ತ ಕಳಸ ಮೆರವಣಿಗೆ ಹಾಗೂ ಪಲ್ಲಕ್ಕಿ ಸೇವೆ ನೆರವೇರಿತು. ಯುವಕರು ನಂದಿಕೋಲು ಕುಣಿಯುವಾಗ ಹಾಕುವ ಹೆಜ್ಜೆಗಳಿಗೆ ಘೋಷಗಳು ಮೊಳಗಿದವು. ದೇವಸ್ಥಾನದಲ್ಲಿ ಕೆಲ ಭಕ್ತರು ಪುರವಂತರಿಂದ ಶಸ್ತ್ರಗಳನ್ನು ಹಾಕಿಸಿಕೊಳ್ಳುವುದರ ಮೂಲಕ ಭಕ್ತಿ ಮೆರೆದರು.
ಪುರವಂತರಾದ ಮೌನೇಶ ಅರ್ಧ ಇಂಚಿನ ಸುತ್ತಳತೆ ಹಾಗೂ 8 ಅಡಿ ಉದ್ದದ ತಾಮ್ರದ ಶಸ್ತ್ರವನ್ನು ಎಡ ಕೈಗೆ ಹಾಕಿಕೊಂಡರು. ಜತೆಗೆ ಕೊಡಪಾನದಲ್ಲಿ ಅಕ್ಕಿ ಸಂಗ್ರಹಿಸಿ ಯಾವುದೇ ಸಹಾಯವಿಲ್ಲದೆ ಶಸ್ತ್ರದ ಸಹಾಯದಿಂದ ಮೇಲಕ್ಕೆತ್ತಿ ಪವಾಡ ಪ್ರದರ್ಶಿಸಿದರು. ಇನ್ನೋರ್ವ ಪುರವಂತ ವೀರೇಶ ಹಾಲೂರು ಸಾಥ್ ನೀಡಿದರು. ನಂತರ ದೇವಸ್ಥಾನದಲ್ಲಿ ಮಹಾಮಂಗಳಾರತಿ ನೆರವೇರಿಸಿ, ಕಳಸಗಳನ್ನು ಶಿಖರದ ಮೇಲೆ ಕೂರಿಸಿದರು. ಶಾಸಕ ಕೆ.ಶಿವನಗೌಡ ನಾಯಕ, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಎ.ರಾಜಶೇಖರ ನಾಯಕ ಇತರರಿದ್ದರು.