

ಅರಕೇರಾ: ಹದಿಮೂರು ವರ್ಷಗಳ ನಂತರ ನಡೆಯುತ್ತಿರುವ ಪಟ್ಟಣದ ಆರಾಧ್ಯ ದೇವತೆ ಶ್ರೀ ಭಗಮ್ಮ ದೇವಿ ಜಾತ್ರೋತ್ಸವಕ್ಕೆ ಮಂಗಳವಾರ ವಿಧ್ಯುಕ್ತವಾಗಿ ಚಾಲನೆ ದೊರೆಯಿತು.
ಇದಕ್ಕೂ ಮುನ್ನ ಮಾಜಿ ಸಂಸದ ಬಿ.ವಿ ನಾಯಕ, ಆರ್‌ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಎ.ರಾಜಶೇಖರ ಅವರು ಶ್ರೀ ಭಗಮ್ಮ ದೇವಿಯ ಐದು ಕೆಜಿ ಬೆಳ್ಳಿ ಮೂರ್ತಿಗೆ ಅಭಿಷೇಕ ಹಾಗೂ ವಿಶೇಷ ಪೂಜೆ ಸಲ್ಲಿಸಿದರು. ವಾದ್ಯ, ಮೇಳ, ಕಳಸದೊಂದಿಗೆ ಮೆರವಣಿಗೆ ಮಾಡಿ ದೇವಸ್ಥಾನಕ್ಕೆ ದೇಣಿಗೆಯಾಗಿ ಅರ್ಪಿಸಿದರು. ನಂತರ ದೇವಸ್ಥಾನದಲ್ಲಿ ದೇವಿ ಮೂರ್ತಿ ಪ್ರಾಣಪ್ರತಿಷ್ಠಾಪನೆ ಕಾರ್ಯ ನೆರವೇರಿತು.
ಬೆಳಗ್ಗೆ 7 ಗಂಟೆಗೆ ನೂತನ ಪಟ್ಟದ ಪೂಜಾರಿ ಅಮ್ಮನವರಿಗೆ ದೇವಸ್ಥಾನದ ಆವರಣದಲ್ಲಿ ಅರಿಶಿಣ ಹಚ್ಚಿ, ಕಂಕಣ ಕಟ್ಟಿ ಗಂಗಾಸ್ಥಳದಿಂದ ತಂದ ಉದಕವನ್ನು ಎರೆದ ಬಳಿಕ ಸಂಪ್ರದಾಯದಂತೆ ಪಟ್ಟಾಭಿಷೇಕ ಮಾಡಲಾಯಿತು. ದೇವಸ್ಥಾನದಲ್ಲಿ ಮಹಾ ಮಂಗಳಾರತಿ ನೆರವೇರಿಸಿದ ಅವರು ದೇವರ ಮನೆಗೆ ಮೆರವಣಿಗೆ ಮೂಲಕ ಹೊರಟರು. ಬಳಿಕ ಗುಂಡು ಮಾರೆಮ್ಮದೇವಿ, ಪಾಲಕಮ್ಮ ದೇವಿ, ಕೆಂಚಮ್ಮ ದೇವಿಯ ಸೇವಾ ಕಾರ್ಯ ನೆರವೇರಿತು. ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.
ಮಾಜಿ ಸಚಿವ ಕೆ.ಶಿವನಗೌಡ ನಾಯಕ, ಜಿಪಂ ಮಾಜಿ ಸದಸ್ಯ ರಾಜಾ ಸತ್ಯನಾರಾಯಣ ನಾಯಕ ಪೊಲೀಸ್ ಪಾಟೀಲ್, ಜಾತ್ರೋತ್ಸವ ಸಮಿತಿ ಅಧ್ಯಕ್ಷ ತಿಮ್ಮಪ್ಪ ನಾಯಕ ಪೊಲೀಸ್ ಪಾಟೀಲ್, ಉಪಾಧ್ಯಕ್ಷ ಕೆ.ಅನಂತರಾಜ ನಾಯಕ, ಕಾರ್ಯದರ್ಶಿ ಚನ್ನವೀರಯ್ಯ ಸ್ವಾಮಿ ಹಿರೇಮಠ, ಪ್ರಮುಖರಾದ ಮಲ್ಲಿಕಾರ್ಜುನಯ್ಯ ಸ್ವಾಮಿ ಹಿರೇಮಠ, ಪ್ರಹ್ಲಾದ್ ಜೋಷಿ, ಸೀತಣ್ಣ ನಾಯಕ ಗುರಿಕಾರ, ವೆಂಕಟೇಶ ನಾಯಕ ದೊರೆ, ಬಸವರಾಜ ಪೂಜಾರಿ, ಹನುಮಂತ್ರಾಯ ಪೂಜಾರಿ, ಸಿದ್ಧಾರ್ಥ ಹವಾಲ್ದಾರ್, ಬಸವರಾಜ ನಾಯಕ ಕ್ವಾಟೆ ದೊರೆ, ಶೇಖರಪ್ಪ ಗೌಡ ಮಾಲಿ ಪಾಟೀಲ್, ವರದರಾಜ ನಾಯಕ ದೊರೆ ತೆಗ್ಗಿಹಾಳ, ಗೋಪಿಕೃಷ್ಣ ಗುರುವಿನ, ರಾಚಯ್ಯ ಸ್ವಾಮಿ ಮಠಪತಿ, ಚಂದ್ರಶೇಖರ ಶೆಟ್ಟಿ ಇತರರಿದ್ದರು.