

ಅರಕೇರಾ: ಸದೃಢ ಮಗುವಿನ ಜನನಕ್ಕೆ ಗರ್ಭಿಣಿಯರು ಪೌಷ್ಟಿಕ ಆಹಾರ ಸೇವಿಸಬೇಕು ಎಂದು ಶ್ರುತಿ ಸಂಸ್ಕೃತಿ ಸಂಸ್ಥೆ ಸಂಯೋಜಕ ರಾಮಣ್ಣ ಎನ್. ಗಣೇಕಲ್ ಹೇಳಿದರು.
ಹಾಳಜಾಡಲದಿನ್ನಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಗರ್ಭಿಣಿ, ಬಾಣಂತಿಯರಿಗೆ ಹಮ್ಮಿಕೊಂಡಿದ್ದ ಪೌಷ್ಟಿಕ ಅಹಾರ ವಿತರಣೆ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು.
ಗರ್ಭಿಣಿ ಹಾಗೂ ಬಾಣಂತಿಯರು ಆರೋಗ್ಯದ ಕಡೆ ಹೆಚ್ಚು ಗಮನಹರಿಸಬೇಕು. ಸೇವಿಸುವ ಆಹಾರದಲ್ಲಿ ಆರೋಗ್ಯದ ಗುಟ್ಟು ಇದೆ. ಕಡಿಮೆ ತೂಕದ ಮಕ್ಕಳಿಗೆ ಮಾರಿಂಗ್ ಪೌಡರ್, ನುಗ್ಗೆ ಸೊಪ್ಪಿನ ಪೌಡರ್ 5 ಗ್ರಾಂ ಬಿಸಿ ನೀರಿನಲ್ಲಿ ಹಾಕಿ ಕುಡಿಸಬೇಕು.
ಇಲ್ಲದಿದ್ದರೆ ಊಟದಲ್ಲಿ ಮಿಶ್ರಣ ಮಾಡಿ ಉಣಬಡಿಸಬೇಕು. ಇದರಿಂದ ಅಪೌಷ್ಟಿಕತೆ ಹೋಗಲಾಡಿಸಬಹುದು. ಗರ್ಭಿಣಿ ಹಾಗೂ ಬಾಣಂತಿಯರು ಹಸಿ ತರಕಾರಿ, ಮೊಟ್ಟೆ, ಮೊಳಕೆ ಕಾಳು ಹೆಚ್ಚಾಗಿ ಸೇವಿಸಬೇಕು ಎಂದರು. ಅಂಗನವಾಡಿ ಕಾರ್ಯಕರ್ತೆ ಭೀಮಮ್ಮ, ಆಶಾ ಕಾರ್ಯಕರ್ತೆ ರೇಣುಕಾ ಇತರರಿದ್ದರು.