

ಅರಕೇರಾ: ಪಟ್ಟಣದ ಸಿದ್ದಯ್ಯ ಹವಲ್ದಾರ ಬಾಲಕರ ಸರ್ಕಾರಿ ಪ್ರೌಢಶಾಲೆಯ 10 ನೇ ತರಗತಿ ವಿದ್ಯಾರ್ಥಿ ಶೇಖ್ ಬಾಬು ಇಮಾಮಸಾಬ್ ಚಿತ್ರಕಲಾ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ ಎಂದು ಮುಖ್ಯ ಶಿಕ್ಷಕ ಜಗದೀಶಪ್ಪ ಬಿ.ಗಣೇಕಲ್ ತಿಳಿಸಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಕಲಬುರಗಿಯ ಎಮ್.ಎಮ್ ಕಾಲೇಜ್ ಆಫ್ ಆರ್ಟ್‌ನಲ್ಲಿ ನಡೆದ 2022-23 ನೇ ಸಾಲಿನ ವಿಭಾಗ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಯ ಸಾಧನೆಗೆ ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜ ನಾಯಕ ಕರ್ನಾಳ, ಚಿತ್ರಕಲಾ ಶಿಕ್ಷಕ ಚಿರಂಜೀವಿ, ಶಿಕ್ಷಕರಾದ ಬಿ.ಕೆ ರಾಜು, ವೆಂಕಟೇಶಪ್ಪ ಎಂ.ಕೋಲಾರ, ಹುಸೇನ ಬಾಷ, ರಾಜು, ಮೀನಾಕ್ಷಿ ಸಂತಸ ವ್ಯಕ್ತಪಡಿಸಿದ್ದಾರೆ.