

ಅರಕೇರಾ: ಭೂ ಪರಿಹಾರ ನೀಡಲು ಆಗ್ರಹಿಸಿ ರೈತರು ಶಾವಂತಗಲ್ ಗ್ರಾಮದ ಬಳಿಯ ಎನ್‌ಆರ್‌ಬಿಸಿ 9ಎ ಕಾಲುವೆಗೆ ಜೆಸಿಬಿಯಿಂದ ಮಣ್ಣು ಹಾಕಿ ಸೋಮವಾರ ಪ್ರತಿಭಟನೆ ನಡೆಸಿದರು.
9ಎ ಕಾಲುವೆ ನಿರ್ಮಾಣಕ್ಕೆ (ವಡವಟ್ಟಿ ವಲಯ)ದ ಕೃಷಿ ಭೂಮಿ ಬಳಸಿಕೊಂಡಿದ್ದು, ಇವುಗಳ ವಾರಸುದಾರ ರೈತರಿಗೆ 10 ವಷರ್ ಗತಿಸಿದರೂ ಪರಿಹಾರ ಸಿಕ್ಕಿಲ್ಲ. ಹಲವು ಬಾರಿ ಸಂಬಂಧಿಸಿದ ಇಲಾಖೆಗಳಿಗೆ ಅಲೆದರೂ ಪ್ರಯೋಜವಾಗಿಲ್ಲ. ಅಧಿಕಾರಿಗಳ ಎಡವಟ್ಟಿನಿಂದ ನಮಗೆ ಸಿಗಬೇಕಾದ ಪರಿಹಾರದ ಮೊತ್ತ ಬೇರೆಯವರ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಇಲ್ಲಿವರೆಗೂ ಮೂರ‌್ನಾಲ್ಕು ಬಾರಿ ಪ್ರತಿಭಟನೆ ನಡೆಸಿದರೂ ಪ್ರಯೋಜನವಾಗಿಲ್ಲ. ಕಾಲುವೆಗೆ ಭೂಮಿ ನೀಡಿದ ಕೃಷಿಕರ ಕುಟುಂಬ ಬೀದಿ ಪಾಲಾಗಿವೆ. ರೈತರಿಗೆ ಪರಿಹಾರ ನೀಡಿ ಇಲ್ಲ ವಿಷ ಕೊಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಲುವೆಗೆ ಭೂಮಿ ಕಳೆದುಕೊಂಡ ರೈತರನ್ನು ಮನವೊಲಿಸಲು ಅಧಿಕಾರಿಗಳು ಹಾಗೂ ಪೊಲೀಸರು ಹರಸಾಹಸಪಟ್ಟರು. ಸ್ಥಳದಲ್ಲಿ ರೈತರು ಹಾಗೂ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆದಿದ್ದರಿಂದ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಕಾಲುವೆಗೆ ಅಡ್ಡಲಾಗಿ ಹಾಕಿದ್ದ ಮಣ್ಣು ತೆರವುಗೊಳಿಸದಂತೆ ರೈತ ಮಹಿಳೆಯರು ಅಡ್ಡಿಪಡಿಸಿ ತಕ್ಷಣವೇ ಪರಿಹಾರ ನೀಡುವಂತೆ ಪಟ್ಟು ಹಿಡಿದರು.
ಕಾಲುವೆಗೆ ನೀರು ಹರಿಸಲು ತಕರಾರು ಮಾಡಬೇಡಿ. ಅರ್ಹ ಫಲಾನುಭವಿಗಳ ಖಾತೆಗೆ ಒಂದು ವಾರದಲ್ಲಿ ಹಣ ಜಮೆ ಮಾಡಲು ಕ್ರಮ ವಹಿಸಲಾಗುವುದು ಎಂದು ತಹಸೀಲ್ದಾರ್ ಯಲ್ಲಪ್ಪ ಸುಬೇದಾರ್, ಡಿವೈಎಸ್ಪಿ ಎನ್.ಮಂಜುನಾಥ, ಚಿಕ್ಕಹೊನ್ನಕುಣಿ ಎಇಇ ಮನೋಹರ ಜಾದವ್ ರೈತರಿಗೆ ಲಿಖಿತ ರೂಪದಲ್ಲಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.
ಭೂಮಿ ಕಳೆದುಕೊಂಡ ರೈತ ಬಸವರಾಜ ಬಾಡ್ಲ ಮಾತನಾಡಿ, ಅಧಿಕಾರಿಗಳು ಒಂದು ವಾರದಲ್ಲಿ ಹಣ ಜಮೆ ಮಾಡುವ ಬಗ್ಗೆ ಲಿಖಿತ ಭರವಸೆ ನೀಡಿದ್ದಾರೆ. ಒಂದು ವೇಳೆ ಅಧಿಕಾರಿಗಳು ನಿರ್ಲಕ್ಷಿಸಿದರೆ ಹೋರಾಟದ ಹಾದಿ ಹಿಡಿಯಲಾಗುವುದು ಎಂದು ಎಚ್ಚರಿಸಿದರು.
ಸಿಪಿಐಗಳಾದ ಎನ್‌ವೈ ಗುಂಡೂರಾವ್, ಪ್ರಕಾಶ ಮಾಳೆ, ಪಿಎಸೈ ಸುಜಾತಾ ನಾಯಕ, ಗಂಗಪ್ಪ ಬುರ್ಲಿ ಇತರರಿದ್ದರು.