ಗಲಗ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೀಗ

Arakera hospistal lock
ಗಲಗ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖ್ಯದ್ವಾರಕ್ಕೆ ಶನಿವಾರ ರಾತ್ರಿ ಬೀಗ ಹಾಕಲಾಗಿತ್ತು.
Published on

ಅರಕೇರಾ: ತಾಲೂಕಿನ ಗಲಗ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶನಿವಾರ ರಾತ್ರಿ ಆಸ್ಪತ್ರೆ ಮುಖ್ಯದ್ವಾರಕ್ಕೆ ಬೀಗ ಹಾಕಿದ್ದರಿಂದ ರೋಗಿಯೊಬ್ಬರು ಚಿಕಿತ್ಸೆ ಸಿಗದೆ ಪರದಾಡಿದ್ದಾರೆ.

ಗ್ರಾಮದ ಯೂಸೂಫ್‌ಗೆ ಹೊಟ್ಟೆ ನೋವು, ಚಳಿ ಜ್ವರ ಕಾಣಿಸಿಕೊಂಡು ಅಸ್ವಸ್ಥರಾಗಿದ್ದರು. ಚಿಕಿತ್ಸೆಗೆಂದು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿದ್ದರು. ಗೇಟ್‌ಗೆ ಬೀಗ ಹಾಕಿಕೊಂಡು ಸಿಬ್ಬಂದಿ ಆಸ್ಪತ್ರೆಯಲ್ಲಿ ಮಲಗಿದ್ದರು. ಸಿಬ್ಬಂದಿಯನ್ನು ರೋಗಿ ಮತ್ತು ಸಂಬಂಧಿ ಸ್ವಲ್ಪ ಹೊತ್ತು ಕೂಗಿ ಕರೆದರೂ ಸ್ಪಂದಿಸಿಲ್ಲ. ಇದರಿಂದ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆಗಮಿಸಿ ರೋಗಿ ಚಿಕಿತ್ಸೆ ಪಡೆದಿದ್ದಾರೆ. ಬಳಿಕ ಬೆಳಗ್ಗೆ ರಾಯಚೂರಿನ ಖಾಸಗಿ ಆಸ್ಪತ್ರೆಗೆ ತೆರಳಿ ಹೆಚ್ಚಿನ ಚಿಕಿತ್ಸೆ ಪಡೆದಿದ್ದಾರೆ.

ರಾತ್ರಿ ವೇಳೆ ಆಸ್ಪತ್ರೆ ಗೇಟ್‌ಗೆ ಬೀಗ ಹಾಕಿಕೊಂಡಿರುವುದು ಟೀಕೆಗೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ. ಕರ್ತವ್ಯ ನಿರತ ವೈದ್ಯರು ಕಡ್ಡಾಯವಾಗಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಗೆಂದು ಬರುವ ರೋಗಿಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಬೇಕು. ನಿರ್ಲಕ್ಷ್ಯ ವಹಿಸಿದ ಸಿಬ್ಬಂದಿ ವಿರುದ್ಧ ನಿಯಮಾನುಸಾರ ಕ್ರಮಕೈಗೊಳ್ಳಬೇಕು ಎಂದು ಒತ್ತಾಯ ಕೇಳಿಬಂದಿದೆ.

ಗಲಗ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡ ಲಾಗುತ್ತಿದೆ. ನಾನು ಒಬ್ಬ ವೈದ್ಯ ಮಾತ್ರ ಸೇವೆ ಸಲ್ಲಿಸುತ್ತಿದ್ದು, ಹೆಚ್ಚಿನ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದೇನೆ. ಪಿಠೋಪಕರಣಗಳ ಸಂರಕ್ಷಣೆಗಾಗಿ ಮಧ್ಯರಾತ್ರಿ ನಂತರ ಬೀಗ ಹಾಕಲಾಗುತ್ತಿದೆ. | ಅಖಿಲೇಶ ವೈದ್ಯಾಧಿಕಾರಿ, ಪಿಎಚ್‌ಸಿ, ಗಲಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net