ವಾಹನ ಸವಾರರ ಸುರಕ್ಷಿತಾ ಪ್ರಯಾಣಕ್ಕೆ ಕ್ರಮ

Arajera road humps
ಅರಕೇರಾದ ದೇವದುರ್ಗ-ಸಿರವಾರ ರಾಜ್ಯ ಹೆದ್ದಾರಿಯ ಮಲ್ಲೆದೇವರಗುಡ್ಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂದೆ ಹಂಪ್ಸ್ ನಿರ್ಮಾಣ ಮಾಡಿರುವುದು.
Published on

ಅರಕೇರಾ: ಪಟ್ಟಣದಲ್ಲಿ ಹಾದು ಹೋಗಿರುವ ದೇವದುರ್ಗ-ಸಿರವಾರ ರಾಜ್ಯ ಹೆದ್ದಾರಿ-61ರ ರಸ್ತೆಯಲ್ಲಿ ಕೆಆರ್‌ಡಿಸಿಎಲ್ ಅಧಿಕಾರಿಗಳು ಹಂಪ್ಸ್ ನಿರ್ಮಿಸಿ ವಾಹನ ಸವಾರರು, ಪ್ರಯಾಣಿಕರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.

ಕೆಆರ್‌ಡಿಸಿಎಲ್ ಅಡಿಯಲ್ಲಿ ದೇವದುರ್ಗ-ಅರಕೇರಾ-ಸಿರವಾರ 31.5 ಕಿಮೀ ಪೈಕಿ, 26 ಕಿಮೀ ರಸ್ತೆ ಕಾಮಗಾರಿ 73 ಕೋಟಿ ರೂ. ವೆಚ್ಚದಲ್ಲಿ ಕಳೆದ ವರ್ಷ ಏಪ್ರಿಲ್‌ನಲ್ಲಿ ಪೂರ್ಣಗೊಂಡಿದೆ. ಆದರೆ, ಇದುವರೆಗೆ ರಸ್ತೆ ಸಂಚಾರ ನಿಯಮದ ಸುರಕ್ಷತಾ ಕ್ರಮ ಕೈಗೊಳ್ಳದ ಕಾರಣ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದರು.

ಹಲವೆಡೆ ರಸ್ತೆ ಅಪಘಾತಗಳು ಸಂಭವಿಸಿದ್ದರೂ ಅಧಿಕಾರಿಗಳು ಮಾತ್ರ ಕ್ರಮವಹಿಸಿರಲಿಲ್ಲ. ಅರಕೇರಾದಿಂದ ದೇವದುರ್ಗಕ್ಕೆ ಹೋಗುವ ರಸ್ತೆಯಲ್ಲಿ ಕೊತ್ತದೊಡ್ಡಿ, ಮಲ್ಲಿನಾಯಕನದೊಡ್ಡಿ, ಮಾನಸಗಲ್ ಕ್ರಾಸ್‌ನಲ್ಲಿ ಹಂಪ್ಸ್‌ಗಳನ್ನು ಅಲ್ಲಲ್ಲಿ ಹಾಕಿದ್ದು ಬಿಟ್ಟರೆ, ಪಿಲಿಗುಂಡ, ಹೇಮನೂರು, ಕೋತಿಗುಡ್ಡ, ಕರಿಮರಡಿ ತಾಂಡಾ, ಅರಕೇರಾ, ಸಿರವಾರ ರಸ್ತೆಯಲ್ಲಿ ಜುಟಮರಡಿ, ರಾಜೀವ ಗಾಂಧಿನಗರ, ಮಲ್ಲೆದೇವರಗುಡ್ಡ, ಕ್ಯಾದಿಗ್ಗೇರಾ ಕ್ರಾಸ್, ರೇಕಲಮರಡಿ, ಜಾಗೀರ ಜಾಡಲದಿನ್ನಿ ಮಾರ್ಗವಾಗಿ ಹಂಪ್ಸ್‌ಗಳನ್ನು ಹಾಕಿರಲಿಲ್ಲ.

ಈ ಕುರಿತು ವಿಜಯವಾಣಿ ಮಾ.19ರಂದು ‘ಈ ರಸ್ತೆಯಲ್ಲಿ ಸಂಚಾರ ಅಪಾಯಕಾರಿ!’ ತಲೆಬರಹದಡಿ ಸುದ್ದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತ ಅಧಿಕಾರಿಗಳು ಅವಶ್ಯವಿರುವ ಪ್ರಮುಖ ಸ್ಥಳಗಳಲ್ಲಿ ಹಂಪ್ಸ್ ಹಾಕಿಸುವ ಮೂಲಕ ಪ್ರಯಾಣಿಕರ ಸುರಕ್ಷತಾ ಪ್ರಯಾಣಕ್ಕೆ ಕ್ರಮ ಕೈಗೊಂಡಿದ್ದಾರೆ. ಶಾಲೆ, ಅಂಗನವಾಡಿ ಕೇಂದ್ರ, ತಿರುವು, ಅಡ್ಡರಸ್ತೆ, ಸೇತುವೆ ಸೇರಿ ಪ್ರಮುಖ ಕಡೆ ರಸ್ತೆ ಸಂಚಾರ ಸುರಕ್ಷತಾ ಫಲಕಗಳನ್ನು ಅಳವಡಿಸುವುದು ಬಾಕಿ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net