

ಅರಕೇರಾ: ವಿದ್ಯಾರ್ಥಿಗಳ ಕೌಶಲ ಅಭಿವ್ಯಕ್ತಿ ಹಾಗೂ ಹೊಸ ವಿಷಯ ಕಲಿಯಲು ಕಲಿಕಾ ಹಬ್ಬ ಅವಕಾಶ ನೀಡುತ್ತದೆ ಎಂದು ಡಿಡಿಪಿಐ ವೃಷಭೇಂದ್ರಯ್ಯ ಹೇಳಿದರು.
ಭೂಮನಗುಂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಇಲಾಖೆಯಿಂದ ಸೋಮವಾರ ಏರ್ಪಡಿಸಿದ್ದ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿಲ್ಲೆಯ 125 ಕ್ಲಸ್ಟರ್‌ಗಳಲ್ಲಿ ಕಾರ್ಯಕ್ರಮ ನಡೆಯತ್ತಿದ್ದು, ಸಂಪನ್ಮೂಲ ವ್ಯಕ್ತಿಗಳನ್ನು ನಿಯೋಜಿಸಲಾಗಿದೆ. ವಿದ್ಯಾರ್ಥಿಗಳ ಗುಣಾತ್ಮಕ ಶಿಕ್ಷಣಕ್ಕೆ ಕಲಿಕಾ ಹಬ್ಬ ಸಹಕಾರಿಯಾಗಲಿದೆ. ಗ್ರಾಮೀಣ ಸೊಗಡು ಹಾಗೂ ಮೌಲ್ಯಯುತ ಶಿಕ್ಷಣ ನೀಡುವ ಮೂಲಕ ಮಕ್ಕಳಲ್ಲಿರುವ ಕೌಶಲ ಹೊರತರುವ ಪ್ರಯತ್ನಗಳು ನಡೆಯಬೇಕು ಎಂದರು.
ಬಿಇಒ ಸುಖದೇವ್ ಮಾತನಾಡಿ, ಕೋವಿಡ್ ಸಾಂಕ್ರಾಮಿಕದಿಂದ ವಿದ್ಯಾರ್ಥಿಗಳು ಕಲಿಕೆಯಲ್ಲಿ ನಷ್ಟ ಅನುಭವಿಸುವಂತಾಗಿತ್ತು. ಕಲಿಕಾ ಹಬ್ಬದಿಂದ ವಿದ್ಯಾರ್ಥಿಗಳಲ್ಲಿ ಚೇತರಿಕೆ ಕಂಡು ಬರುತ್ತಿದೆ. ಶಿಕ್ಷಣ ಪ್ರತಿಯೊಬ್ಬರ ಬಾಳಿಗೆ ಬೆಳಕಾಗಬೇಕು. ಮಕ್ಕಳ ಉತ್ಸುಕತೆಯನ್ನು ಶಿಕ್ಷಕರು ಬಳಸಿಕೊಂಡು ಮಾದರಿ ವಿದ್ಯಾರ್ಥಿಗಳನ್ನಾಗಿ ಬೆಳೆಸಬೇಕು ಎಂದರು.
ವಿದ್ಯಾರ್ಥಿಗಳು ಸೀರೆ ತೊಟ್ಟು ಕುಂಭಗಳನ್ನು ಹೊತ್ತು ಕಾರ್ಯಕ್ರಮಕ್ಕೆ ಮೆರಗು ತಂದರು. ಎತ್ತಿನಬಂಡಿಯೊಂದಿಗೆ ಗ್ರಾಮದಲ್ಲಿ ವಾದ್ಯ ಮೇಳದೊಂದಿಗೆ ಮೆರವಣಿಗೆ ನಡೆಯಿತು. ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟಗಾರರ ಛದ್ಮ ವೇಷ ಹಾಗೂ ಲಂಬಾಣಿ ಸಮುದಾಯದ ಧಿರಿಸು ಧರಿಸಿ ಕಳೆತಂದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.