

ಅರಕೇರಾ: ಕಲಿಯುವ ಮತ್ತು ನಲಿಯುವ ವಯಸ್ಸಿನ ಮಕ್ಕಳ ಮನಸ್ಸಿನ ತುಂಬ ಬಣ್ಣದ ಕನಸುಗಳನ್ನು ಹೊತ್ತುಕೊಂಡಿರುತ್ತಾರೆ. ಅವರ ಬದುಕಿಗೆ ಯಾರೊಬ್ಬರೂ ಕಂಟಕವಾಗದಿರಿ ಎಂದು ಶ್ರುತಿ ಸಂಸ್ಕೃತಿ ಸಂಸ್ಥೆ ಕಲಾ ತಂಡದ ನಾಯಕಿ ಚಿನ್ನಕ್ಕ ಹೇಳಿದರು.
ಮುಷ್ಟೂರು ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಶ್ರುತಿ ಸಂಸ್ಕೃತಿ ಸಂಸ್ಥೆಯಿಂದ ಬುಧವಾರ ಏರ್ಪಡಿಸಿದ್ದ ಬಾಲ್ಯ ವಿವಾಹ ಹಾಗೂ ಬಾಲ ಕಾರ್ಮಿಕ ಪದ್ಧತಿ ತಡೆ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಾಲ್ಯ ವಿವಾಹವು ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅವರಲ್ಲಿ ಗರ್ಭ ಚೀಲ ಬೆಳೆದಿರುವುದಿಲ್ಲ. ಜನಿಸುವ ಮಗುವು ಅಂಗವೈಕಲ್ಯ ಅಥವಾ ತಾಯಿ-ಮಗು ಹುಟ್ಟು-ಸಾವಿನ ನಡುವೆ ಹೋರಾಡಬೇಕಾಗುವ ಅನಿವಾರ್ಯತೆ ಎದುರಾಗುತ್ತದೆ. ಹಣದಾಸೆಗೆ ಶಾಲೆ ಬಿಟ್ಟು ಕೂಲಿ ಕೆಲಸಕ್ಕೆ ಕಳುಹಿಸಬೇಡಿ ಎಂದರು.
ಈ ವೇಳೆ ಬೀದಿ ನಾಟಕ ಪ್ರದರ್ಶಿಸಲಾಯಿತು. ಸಂಸ್ಥೆ ಪದಾಧಿಕಾರಿಗಲಾದ ರಾಮಣ್ಣ ಎನ್ ಗಣೇಕಲ್, ಡಿಂಗ್ರಿ ನರಸಪ್ಪ, ಪ್ರಮುಖರಾದ ಗೌರಮ್ಮ, ವೀರೇಶ, ಸಂಗಪ್ಪ ಗಬ್ಬೂರು, ನಾಗರತ್ನ, ಆಶಾ ಕಾರ್ಯಕರ್ತೆ ಎಲ್ಲಮ್ಮ ಗೆಜ್ಜೆಭಾವಿ, ಜಯಮ್ಮ ಇತರರಿದ್ದರು.