

ಅರಕೇರಾ: ತಾಲೂಕಿನ ಗಲಗ ಗ್ರಾಪಂ ವ್ಯಾಪ್ತಿಯ ಚಡಕಲಗುಡ್ಡ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಮಂಜೂರಾದ ನಿಧಿ ದುರುಪಯೋಗವಾಗಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಆರೋಪಿಸಿದರು.
ರಾಯಚೂರಿನಲ್ಲಿ ಜಿಪಂ ಸಿಇಒ ಈಶ್ವರ ಕುಮಾರ ಕಾಂದೂಗೆ ಶನಿವಾರ ದೂರು ಸಲ್ಲಿಸಿ, ಗ್ರಾಮದ ಸರ್ಕಾರಿ ಹಿಪ್ರಾ ಶಾಲೆಯಲ್ಲಿ ವಾಲಿಬಾಲ್ ಕೋಟ್ ನಿರ್ಮಾಣಕ್ಕಾಗಿ 4 ಲಕ್ಷ ರೂ. ಮಂಜೂರಾಗಿದ್ದು, ಹಣ ಬಿಡುಗಡೆಗೊಂಡು ಮೂರು ತಿಂಗಳು ಕಳೆದರೂ ಕಾಮಗಾರಿ ಆರಂಭವಾಗಿರುವುದಿಲ್ಲ.
ಈ ಕುರಿತು ಸಂಬಂಧಿಸಿದ ಅಧಿಕಾರಿಗಳನ್ನು ವಿಚಾರಿಸಿದರೆ ನಿರ್ಲಕ್ಷೃದಿಂದ ಪ್ರತಿಕ್ರಿಯಿಸುತ್ತಿದ್ದಾರೆ. ಕಾಮಗಾರಿ ಮಾಡದೆ ನರೇಗಾ ಯೋಜನೆ ನಿಧಿಯನ್ನು ಲಪಟಾಯಿಸಿರುವ ಶಂಕೆ ಇದೆ.
ಸರ್ಕಾರ ತಕ್ಷಣ ತನಿಖೆ ನಡೆಸಿ ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸಂಘದ ಗ್ರಾಮ ಘಟಕದ ಅಧ್ಯಕ್ಷ ಎಚ್.ರೆಡ್ಡಿ ನಾಯಕ, ಪ್ರಮುಖರಾದ ಮುನಿಯಪ್ಪ ನಾಯಕ, ಹನುಮಗೌಡ, ಹನುಮಂತ್ರಾಯ, ರಾಮು ಇತರರಿದ್ದರು.