

ಅರಕೇರಾ: ಬಿ.ಗಣೇಕಲ್ ಕ್ರಾಸ್ ಬಳಿಯಿರುವ 25 ಕೆವಿ ಸಾಮರ್ಥ್ಯದ ವಿದ್ಯುತ್ ಪರಿವರ್ತಕ(ಟಸಿ) ಸುಟ್ಟಿರುವುದರಿಂದ ಪಟ್ಟಣದ 6ನೇ ವಾರ್ಡ್ ಜನರಿಗೆ ಕುಡಿಯುವ ನೀರು ಪೂರೈಕೆಯಲ್ಲಿ ತೊಂದರೆ ಉಂಟಾಗಿದೆ.
ಪಟ್ಟಣದ 6ನೇ ವಾರ್ಡ್‌ಗೆ ಸರಬರಾಜು ಮಾಡುವ ಕುಡಿಯುವ ನೀರಿನ ಯಂತ್ರಕ್ಕೆ ಅಳವಡಿಸಿದ್ದ ಟಿಸಿ ಕಳೆದ ನಾಲ್ಕು ದಿನಗಳ ಹಿಂದೆ ಸುಟ್ಟಿದೆ. ಇದರಿಂದ ಕುಡಿಯುವ ನೀರಿಗೆ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.
ವಿದ್ಯುತ್ ಪರಿವರ್ತಕ ದುರಸ್ತಿಗೆ ಅಧಿಕಾರಿಗಳಿಂದ ಸರಿಯಾದ ಸ್ಪಂದನೆ ದೊರೆಯುತ್ತಿಲ್ಲ. ಇಂದು, ನಾಳೆ ಹೊಸ ಪರಿವರ್ತಕ ನೀಡುವುದಾಗಿ ಭರವಸೆ ನೀಡುತ್ತಿದ್ದಾರೆ. ಸ್ಥಳೀಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶೀಘ್ರ ವಿದ್ಯುತ್ ಪರಿವರ್ತಕ ದುರಸ್ತಿಗೆ ಕ್ರಮ ವಹಿಸುವಂತೆ ಜೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕೂಡಲೇ ಸಮಸ್ಯೆ ಪರಿಹರಿಸಬೇಕು ಎಂದು ವಾರ್ಡ್ ನಿವಾಸಿಗಳಾದ ಚಾಂದಪಾಷಾ ಬಡಿಗೇರ್, ಬಸವರಾಜ, ರವಿಕುಮಾರ, ಆಂಜನೇಯ ಒತ್ತಾಯಿಸಿದರು.