ಟೈಮ್ಸ್ ಹಾಸನ ಪಿಯು ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ

26ark1
Published on

ಅರಕಲಗೂಡು: ಸ್ಪರ್ಧಾತ್ಮಕ ಪ್ರಪಂಚದಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಶಾಸಕ ಎ. ಮಂಜು ತಿಳಿಸಿದರು.
ಪಟ್ಟಣದ ಟೈಮ್ಸ್ ಹಾಸನ ಪಿಯು ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ಫ್ರೆಶರ್ಸ್ ಡೇ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ದ್ವಿತೀಯ ಪಿಯು ಪರೀಕ್ಷೆಯಲ್ಲಿ ಈ ಕಾಲೇಜಿನ ವಿದ್ಯಾರ್ಥಿ ರಾಜ್ಯಮಟ್ಟದಲ್ಲಿ 7ನೇ ರ‌್ಯಾಂಕ್ ಪಡೆದಿರುವುದು ಹೆಮ್ಮೆಯ ಸಂಗತಿ. ಶಿಕ್ಷಣ ಸಂಸ್ಥೆಗಳು ಪಠ್ಯ ಚಟುವಟಿಕೆಗೆ ಕೊಡುವಷ್ಟೇ ಮಹತ್ವವನ್ನು ಪಠ್ಯೇತರ ವಿಭಾಗಕ್ಕೂ ನೀಡಬೇಕು ಮಕ್ಕಳಿಗೆ ಕ್ರೀಡೆಗಳ ಬಗ್ಗೆ ಹೆಚ್ಚು ಆಸಕ್ತಿ ಬೆಳೆಸುವ ಕಾರ್ಯ ನಡೆಯಬೇಕು ಎಂದರು. ಕಾಲೇಜಿನ ಕಾರ್ಯದರ್ಶಿ ಬಿ.ಕೆ. ಗಂಗಾಧರ್ ಮಾತನಾಡಿ, ಗ್ರಾಮೀಣ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂಬ ಮಹತ್ವಾಕಾಂಕ್ಷೆಯಿಂದ ಪ್ರಾರಂಭಿಸಿದ ಕಾಲೇಜು ಉನ್ನತ ಸಾಧನೆ ಮಾಡುತ್ತಿದೆ. ನಮ್ಮ ಸಂಸ್ಥೆ ಶೀಘ್ರದಲ್ಲೆ ಸ್ವಂತ ಕಟ್ಟಡ ಹಾಗೂ ಉತ್ತಮ ಕ್ಯಾಂಪಸ್ ಹೊಂದಲಿದೆ ಎಂದು ತಿಳಿಸಿದರು. ಪ್ರಾಂಶುಪಾಲ ನವೀನ್ ಪಿ. ಉಲಿವಾಲ ಅಧ್ಯಕ್ಷತೆ ವಹಿಸಿದ್ದರು. ಪಶು ವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ. ಎ.ಡಿ. ಶಿವರಾಮ್, ಉಪನ್ಯಾಸಕರಾದ ಕೃಷ್ಣಮೂರ್ತಿ, ಪ್ರಜ್ವಲ್, ಗೋಪಿನಾಥ್, ರಾಕೇಶ್ ಇದ್ದರು. ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ ಮನರಂಜನಾ ಕಾರ್ಯಕ್ರಮಗಳು ಮುದ ನೀಡಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net