

ಅರಕಲಗೂಡು : ಬೆಂಗಳೂರು ನಗರವನ್ನು ಕಟ್ಟಿ ವಿಶ್ವಕ್ಕೆ ಮಾದರಿಯಾದ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸೋಣ ಎಂದು ಶಾಸಕ ಎ. ಮಂಜು ತಿಳಿಸಿದರು. ಪಟ್ಟಣದ ತಾಪಂ ಸಭಾಂಗಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಮುದಾಯಗಳನ್ನು ಕೇವಲ ಓಲೈಕೆ ಮಾಡುವ ಉದ್ದೇಶದಿಂದ ಜಯಂತಿಗಳ ಆಚರಣೆ ಮಾಡುವುದು ನೋವಿನ ಸಂಗತಿ. ಮಹನೀಯರು ಸಮಾಜಕ್ಕೆ ನೀಡಿರುವ ಕೊಡುಗೆ ಹಾಗೂ ಆವರ ಆದರ್ಶಗಳ ಕುರಿತು ಚಿಂತನೆ ನಡೆಯಬೇಕು. ಅವುಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು. ಮಹಾತ್ಮರ ಜಯಂತಿ, ಉತ್ಸವಗಳಲ್ಲಿ ಸಮಾಜದ ಎಲ್ಲ ವರ್ಗದವರೂ ಪಾಲ್ಗೊಂಡಾಗ ಅದು ಅರ್ಥಪೂರ್ಣ ಎನಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಮಂಜು ಹೇಳಿದರು.
ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ, ತಾಪಂ ಇಒ ಪ್ರಕಾಶ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.