

ಅರಕಲಗೂಡು : ನೂತನ ಸಂವತ್ಸರದ ಆಗಮನ, ಯುಗಾದಿ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಶನಿವಾರ ಪಟ್ಟಣದಲ್ಲಿ ನಾಗರಿಕರು ಅಗತ್ಯ ವಸ್ತುಗಳನ್ನು ಖರೀದಿಸುವ ದೃಶ್ಯ ಸಾಮಾನ್ಯವಾಗಿತ್ತು. ಪಟ್ಟಣದ ಮಾರಕಟ್ಟೆ ಪ್ರದೇಶಗಳು ಸೇರಿದಂತೆ ತಾಲೂಕಿನ ಕೊಣನೂರು, ರಾಮನಾಥಪುರ, ಬಸವಾಪಟ್ಟಣ ಕೇರಳಾ ಪುರದ ದಿನವಹಿ ಮಾರುಕಟ್ಟೆ ಪ್ರದೇಶಗಳಲ್ಲಿ ಬಿರು ಬಿಸಿಲ ತಾಪಮಾನದಲ್ಲೂ, ವಸ್ತುಗಳ ಬೆಲೆ ಏರಿಕೆ ಬಿಸಿ ನಡುವೆಯೂ ಗ್ರಾಹಕರು ಖರೀದಿಯಲ್ಲಿ ಮಗ್ನರಾಗಿದ್ದರು.
ರಾಮನಾಥಪುರದಲ್ಲಿ ಸೋಮವಾರ ನಡೆಯಬೇಕಿದ್ದ ವಾರದ ಸಂತೆ ಹಬ್ಬದ ನಿಮಿತ್ತ ಶನಿವಾರವೇ ನಡೆಯಿತು. ಒಂದು ಮಾರು ಸೇವಂತಿಗೆ ಹೂವಿಗೆ 130ರಿಂದ 160 ರೂ. ವರೆಗೆ ಬೆಲೆ ಇತ್ತು. ಸಂತೆಯಲ್ಲಿ ತರಕಾರಿ, ಸೊಪ್ಪಿನ ಬೆಲೆಗಳೂ ಗಗನ ಮುಖಿಯಾಗಿದ್ದವು. ನೂಕು ನುಗ್ಗಲಿನ ನಡುವೆಯೇ ಜೋರು ವ್ಯಾಪಾರ ನಡೆದಿದ್ದು ಗಮನ ಸೆಳೆಯಿತು.