

ಅರಕಲಗೂಡು: ಇಲ್ಲಿನ ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿ ಸದಸ್ಯರಿಗೆ ವಿಪ್ ಜಾರಿಗೊಳಿಸಿದ್ದರೂ ಮೈತ್ರಿ ಅಭ್ಯರ್ಥಿಗೆ ಸೋಲುಂಟಾಗಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪ್ರದೀಪ್‌ಕುಮಾರ್ ಅಧ್ಯಕ್ಷರಾಗಿ ಗೆಲುವು ಸಾಧಿಸಿದರು.
ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿ-ಜೆಡಿಎಸ್ ಮೈತ್ರಿ ಬೆಂಬಲಿತ ಅಭ್ಯರ್ಥಿ ಸುಭಾನ ಷರೀಫ್ ಲಾಟರಿ ಮೂಲಕ ಅದೃಷ್ಟಶಾಲಿಯಾಗಿ ಆಯ್ಕೆಯಾದರು.
ಕಾಂಗ್ರೆಸ್‌ನಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಪ್ರದೀಪ್‌ಕುಮಾರ್ 10 ಮತಗಳನ್ನು ಗಳಿಸಿ ಚುನಾಯಿತರಾದರು. ಪ್ರತಿಸ್ಪರ್ಧಿ ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿ ರಮೇಶ್ ವಾಟಾಳ್ 9 ಮತಗಳನ್ನು ಪಡೆದು ಪರಾಭವಗೊಂಡರು. ಬಿಜೆಪಿ-ಜೆಡಿಎಸ್ ಮೈತ್ರಿ ಬೆಂಬಲಿತ ಅಭ್ಯರ್ಥಿಯಾಗಿ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಸುಭಾನ ಷರೀಫ್ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪಲ್ಲವಿ ಅವರಿಗೆ ತಲಾ 9 ಮತಗಳು ಲಭಿಸಿದವು. ಲಾಟರಿ ಮೂಲಕ ಸುಭಾನ ಷರೀಫ್ ಉಪಾಧ್ಯಕ್ಷರಾಗಿ ಆಯ್ಕೆಯಾದರು. ತಹಸೀಲ್ದಾರ್ ಕೆ.ಸಿ.ಸೌಮ್ಯಾ, ತಾಲೂಕು ಕಚೇರಿ ಶಿರಸ್ತೇದಾರ್ ಸಿ.ಸ್ವಾಮಿ ಚುನಾವಣಾ ಕಾರ್ಯ ನಿರ್ವಹಿಸಿದರು.
ಗುದ್ದುಗೆ ಗುದ್ದಾಟಕ್ಕೆ ತೆರೆ: ಪಪಂ ಆಡಳಿತ ಚುಕ್ಕಾಣಿ ಹಿಡಿಯಲು ಕಳೆದೊಂದು ವಾರದಿಂದ ಇನ್ನಿಲ್ಲದ ರಾಜಕೀಯ ಕಸರತ್ತು ನಡೆದಿತ್ತು. ಪಪಂ 17 ಸದಸ್ಯರ ಪೈಕಿ ಜೆಡಿಎಸ್, ಬಿಜೆಪಿಯಿಂದ ತಲಾ 6 ಹಾಗೂ ಕಾಂಗ್ರೆಸ್ ಪಕ್ಷದ ಐವರು ಸದಸ್ಯರಿದ್ದರು. ಜೆಡಿಎಸ್, ಬಿಜೆಪಿಗೆ ಬಹುಮತ ಇದ್ದರೂ ನಾಲ್ವರು ಜೆಡಿಎಸ್ ಸದಸ್ಯರು ಮತ್ತು ಇಬ್ಬರು ಬಿಜೆಪಿ ಸದಸ್ಯರು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಸೂಚಿಸಿದ್ದರು. ಕಾಂಗ್ರೆಸ್ ಪಕ್ಷದ ಇಬ್ಬರು ಸದಸ್ಯರು ಜೆಡಿಎಸ್, ಬಿಜೆಪಿ ಮೈತ್ರಿ ಅಭ್ಯರ್ಥಿಗೆ ಬೆಂಬಲ ವ್ಯಕ್ತಪಡಿಸಿದ್ದರು.
ಹೀಗಾಗಿ ಬಹುಮತವಿದ್ದ ಕಾರಣಕ್ಕಾಗಿ ಜೆಡಿಎಸ್ ಮತ್ತು ಬಿಜೆಪಿ ಚುನಾವಣೆಯಲ್ಲಿ ಸದಸ್ಯರಿಗೆ ವಿಪ್ ಜಾರಿಗೊಳಿಸಿತ್ತು. ಬಹುಮತವಿದ್ದು ವಿಪ್ ಜಾರಿಗೊಳಿಸಿದರೂ ಮೈತ್ರಿ ಅಭ್ಯರ್ಥಿ ಸೋಲನಭವಿಸಿ ಶಾಸಕ ಎ.ಮಂಜು ಮುಖಭಂಗ ಅನುಭವಿಸಿದರು.
ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಪ್ರದೀಪ್ ಕುಮಾರ್ ಅವರಿಗೆ ಸಂಸದ ಶ್ರೇಯಸ್ ಪಟೇಲ್ ಮತದಾನ ಮಾಡಿದರು. ಬಿಜೆಪಿ ಚಿಹ್ನೆಯಡಿ ಗೆದ್ದು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪಲ್ಲವಿ ಅವರಿಗೆ ಸಂಸದರು ಕೊನೆ ಕ್ಷಣದಲ್ಲಿ ನಿರ್ಧಾರ ಬದಲಿಸಿ ಮತ ಚಲಾಯಿಸದೆ ಹೊರ ನಡೆದರು. ಶಾಸಕ ಎ.ಮಂಜು ಮೈತ್ರಿ ಅಭ್ಯರ್ಥಿಯಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಇಬ್ಬರಿಗೂ ತಮ್ಮ ಹಕ್ಕು ಚಲಾಯಿಸಿದರು. ಹೀಗಾಗಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗೆ 10 ಮತಗಳು ಹಾಗೂ ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿಗೆ 9 ಮತಗಳು ಬಂದವು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿಗೆ ತಲಾ 9 ಮತಗಳು ಲಭಿಸಿ ಸಮಬಲ ಸಾಧಿಸಿದರು.
ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಅಭ್ಯರ್ಥಿಗಳ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಕಾಂಗ್ರೆಸ್ ಕಾರ್ಯಕರ್ತರು ಮುಖಂಡರಾದ ಎಂ.ಟಿ. ಕೃಷ್ಣೇಗೌಡ, ಸಿ.ಡಿ. ದಿವಾಕರ್ ಗೌಡ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್ ಅವರನ್ನು ಹೆಗಲ ಮೇಲೆ ಹೊತ್ತು ಕುಣಿದು ಕುಪ್ಪಳಿಸಿದರು.
ಅಭಿವೃದ್ಧಿಗೆ ಶ್ರಮಿಸುವೆ: ಅಧ್ಯಕ್ಷರಾಗಿ ಆಯ್ಕೆಯಾದ ಪ್ರದೀಪ್‌ಕುಮಾರ್ ಮಾತನಾಡಿ, ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಟ್ಟಣದ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.
ಪುರಸಭೆಯಾಗಿ ಮೇಲ್ದರ್ಜೆಗೇರಲಿ: ಕಾಂಗ್ರೆಸ್ ಮುಖಂಡ ಎಂ.ಟಿ.ಕೃಷ್ಣೇಗೌಡ ಮಾತನಾಡಿ, ಅರಕಲಗೂಡು ಪಟ್ಟಣ ಪಂಚಾಯಿತಿ ಪುರಸಭೆಯಾಗಿ ಮೇಲ್ದರ್ಜೆಗೇರಿದರೆ ಹೆಚ್ಚು ಅನುದಾನ ಲಭಿಸಿ ಅಭಿವೃದ್ಧಿ ಕಾರ್ಯಗಳಿಗೆ ನೆರವಾಗಲಿದೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಗಮನ ಹರಿಸಬೇಕು, ನಾನೂ ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
ಹೈಕಮಾಂಡ್‌ಗೆ ದೂರು: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್ ಮಾತನಾಡಿ, ಕಾಂಗ್ರೆಸ್ ಪಕ್ಷದ ಚಿಹ್ನೆಯಡಿ ಗೆದ್ದ ಇಬ್ಬರು ಸದಸ್ಯರು ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಗೆ ಮತ ಚಲಾಯಿಸುವಂತೆ ಪರೋಕ್ಷವಾಗಿ ಸಹಕಾರ ನೀಡಿದ ಮುಖಂಡ ಶ್ರೀಧರ್‌ಗೌಡ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿ ಕಾಂಗ್ರೆಸ್‌ಗೆ ಅನ್ಯಾಯ ಎಸಗಿದ್ದಾರೆ. ಈ ಕುರಿತು ಪಕ್ಷದ ವರಿಷ್ಠರ ಗಮನಕ್ಕೆ ತರಲಾಗುವುದು ಎಂದರು.
ಕಾಂಗ್ರೆಸ್ ಸರ್ಕಾರ ಕೆಡವಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವುದಾಗಿ ಹೇಳುವ ಶಾಸಕ ಎ.ಮಂಜು ಅವರೊಂದಿಗೆ ಶ್ರೀಧರ್‌ಗೌಡ ಹಿಂಭಾಗಿಲಿನಿಂದ ಒಳ ಒಪ್ಪಂದ ಮಾಡಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಿರುವುದು ಖಂಡನೀಯ. ಇಲ್ಲಿ ಪಕ್ಷದ ಬಾವುಟ ಹಾರಿಸಲು ನಾವು ಬೆವರು ಹರಿಸಿದ್ದೇವೆ. ಶ್ರೀಧರ್ ಗೌಡ ಪಕ್ಷ ವಿರೋಧಿ ಚಟುವಟಿಕೆಗೆ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜೆಡಿಎಸ್-ಬಿಜೆಪಿ ಪಾದಯಾತ್ರೆ ಮೈಸೂರಿಗೆ ತಲುಪುವಷ್ಟರಲ್ಲಿ ಸರ್ಕಾರ ಪಥನವಾಗುತ್ತದೆ ಎಂದಿದ್ದ ಎ.ಮಂಜು ಹೇಳಿಕೆ ಕ್ಷುಲ್ಲಕತನದಿಂದ ಕೂಡಿದೆ. ಇಂತವರೊಂದಿಗೆ ಶ್ರೀಧರ್‌ಗೌಡ ರಾಜಕೀಯ ನಂಟು ಹೊಂದಿರುವುದು ಸದ್ಯದಲ್ಲೇ ಬಹಿರಂಗವಾಗಲಿದೆ ಎಂದರು.
ಈ ಹಿಂದಿನ ಎರಡು ಅವಧಿಯಲ್ಲಿ ಪಪಂ ಅಧ್ಯಕ್ಷರಾಗಲು ಮುಸ್ಲಿಂ ಸಮುದಾಯ ಹಾಗೂ ಪರಿಶಿಷ್ಟ ವರ್ಗದ ಅಭ್ಯರ್ಥಿಗೆ ಮಣೆ ಹಾಕಿ ಸಹಕಾರ ನೀಡಲಾಗಿತ್ತು ಎಂದರು.
ವಿಪ್ ಉಲ್ಲಂಘನೆಗೆ ಕಿಡಿ: ಮತದಾನ ಮಾಡಿದ ನಂತರ ಶಾಸಕ ಎ. ಮಂಜು ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಜೆಡಿಎಸ್‌ನ ತಲಾ ಆರು ಸದಸ್ಯರಿದ್ದು ಬಹುಮತ ಇತ್ತು. ಹೀಗಾಗಿ ವಿಪ್ ಜಾರಿಗೊಳಿಸಲಾಗಿತ್ತು. ವಿಪ್ ಉಲ್ಲಂಘಿಸಿದ ಸದಸ್ಯರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಕಾಂಗ್ರೆಸ್ ನವರು ನಮ್ಮ ಪಕ್ಷದ ಮಹಿಳಾ ಸದಸ್ಯರ ಪತಿ ಮೇಲೆ ಹಲ್ಲೆ ನಡೆಸಿ ಹೆದರಿಸಿ ಹೊತ್ತೊಯ್ದಿದ್ದಾರೆ. ಈ ರೀತಿಯ ಬೆದರಿಕೆ ರಾಜಕಾರಣ ಒಳ್ಳೆಯದಲ್ಲ, ಇದಕ್ಕೆ ತಕ್ಕಪಾಠ ಕಲಿಸಲಾಗುವುದು ಎಂದು ಗುಡುಗಿದ ಎ.ಮಂಜು, ರಾಜ್ಯದಲ್ಲಿ ಸದ್ಯದಲ್ಲೇ ಸರ್ಕಾರ ಬದಲಾಗಲಿದೆ. ಇಲ್ಲಿಯೂ ಇನ್ನೆರಡು ತಿಂಗಳಲ್ಲಿ ಪಪಂ ಆಡಳಿತದ ಚುಕ್ಕಾಣಿ ಹಿಡಿಯಲಿದೆ ಎಂದು ಹೇಳಿದರು.