

ರೋಣ: ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡು ವರ್ಷಗಳು ಕಳೆಯುತ್ತಾ ಬಂದಿದ್ದು, ಚುನಾವಣೆ ಪೂರ್ವದಲ್ಲಿ ರಾಜ್ಯದ ಜನರಿಗೆ ಕೊಟ್ಟ ಎಲ್ಲ ಭರವಸೆಗಳನ್ನು ಈಡೇರಿಸುವಲ್ಲಿ ಯಶಸ್ವಿಯಾಗಿದೆ. ಪಂಚ ಗ್ಯಾರಂಟಿಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸಲು ಸಿದ್ದರಾಮಯ್ಯ ಶ್ರಮಿಸಿದ್ದಾರೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಬುಧವಾರ ತಾಲೂಕಿನ ಸವಡಿ ಗ್ರಾಮದಲ್ಲಿ 90 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ಅರಹುಣಸಿ ಗ್ರಾಮದಲ್ಲಿ 30 ಲಕ್ಷ ರೂ. ವೆಚ್ವದಲ್ಲಿ ಸಿಸಿ ರಸ್ತೆ ಕಾಮಗಾರಿ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಪಂಚ ಗ್ಯಾರಂಟಿಗಳನ್ನು ಸರಿಯಾಗಿ ಜಾರಿಗೊಳಿಸಿದ್ದೇವೆ. ಅರಹುಣಸಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 2 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಶೀಘ್ರದಲ್ಲಿ ಶಾಲಾ ಕೊಠಡಿ ನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸಲಿದ್ದೇವೆ. ಗ್ರಾಮಸ್ಥರ ಸಹಕಾರವಿದ್ದರೆ ವಿವಿಧ ಯೋಜನೆಗಳಡಿ ಸಣ್ಣ ಪುಟ್ಟ ಕಾಮಗಾರಿಗಳನ್ನು ಮಾಡಬಹುದಾಗಿದೆ. ಸಣ್ಣ ಕೆಲಸಗಳನ್ನು ನರೇಗಾ ಯೋಜನೆಯಲ್ಲಿ ಹಾಕಿಕೊಳ್ಳಲು ಅವಕಾಶವಿದೆ. ಗ್ರಾಮ ಪಂಚಾಯಿತಿಗೆ ಬರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.
ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಬಸವರಾಜ ನವಲಗುಂದ, ಸವಡಿ ಗ್ರಾಪಂ ಅಧ್ಯಕ್ಷೆ ಯಲ್ಲವ್ವ ಯಲಿಗಾರ, ಉಪಾಧ್ಯಕ್ಷೆ ಬೀಬಿಜಾನ್ ತರಫದಾರ, ಮಲ್ಲನಗೌಡ್ರ ಪರಡ್ಡಿ, ಶಂಕ್ರಪ್ಪ ಗಡಗಿ, ಸಂಗಮೇಶ ಶೀಲವಂತರ, ಶರಣಪ್ಪ ಪರಡ್ಡಿ, ಬಸವರಾಜ ಬೂಸರಡ್ಡಿ, ಅರಹುಣಸಿ ಗ್ರಾಮದ ನನ್ನಸ್ವಾಮಿ ಹಿರೇಮಠ, ಶಂಕರಗೌಡ ಗಿರಡ್ಡಿ, ಕೇದಾರಗೌಡ ಪಾಟೀಲ, ಶರಣಪ್ಪಗೌಡ ಕಾರಡ್ಡಿ, ಎಸ್.ಆರ್. ಪಾಟೀಲ, ಚಿಂದಬರಗೌಡ ಸುಳ್ಳದ, ಮುತ್ತನಗೌಡ ಚೌಡರಡ್ಡಿ, ಮಲ್ಲಿಕಾರ್ಜುನ ಗಾರ್ಗಿ, ನಾಗರಾಜ ಗುದ್ನೆಪ್ಪನವರ, ಶರಣಪ್ಪಗೌಡ ಪಾಟೀಲ ಇತರರಿದ್ದರು.