

ಬನ್ನಿಕುಪ್ಪೆ: ಇತ್ತೀಚಿನ ದಿನಗಳಲ್ಲಿ ಅರಗಿಗೆ ದೇಶದಲ್ಲಿ ಹೆಚ್ಚು ಬೇಡಿಕೆ ಇದ್ದು, ಭಾರತವು ಅರಗು ಉತ್ಪಾದನೆಯಲ್ಲಿ ಪ್ರಪಂಚದಲ್ಲೇ ಎರಡನೇ ಸ್ಥಾನವನ್ನು ಕಾಯ್ದುಕೊಂಡಿದೆ ಎಂದು ಅರಗು ಕೃಷಿಕ ಚೆಲುವರಾಜು ತಿಳಿಸಿದರು.
ಬನ್ನಿಕುಪ್ಪೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಹುಣಸೂರು ಕೃಷಿ ಇಲಾಖೆಯ ನಿರ್ವಹಣಾ ಸಂಸ್ಥೆಯಿಂದ ಇತ್ತೀಚೆಗೆ ಆಯೋಜಿಸಿದ್ದ ರೈತ ಮಹಿಳೆಯರ ಸ್ವಸಹಾಯ ಗುಂಪುಗಳಿಗೆ ಕೌಶಲ ಅಭಿವೃದ್ಧಿ ಮತ್ತು ಸಾಮರ್ಥ್ಯ ಬಲವರ್ಧನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ರೈತರು ತಮ್ಮ ಜಮೀನುಗಳಲ್ಲಿ ಇರುವ ಕಾಡು ಸಸ್ಯಗಳಾದ ಎಲಚಿ, ಅರಳಿ, ಮುತ್ತುಗ ಮತ್ತು ಅತ್ತಿ ಮರಗಳಲ್ಲಿ ಸುಲಭವಾಗಿ ಅರಗನ್ನು ಉತ್ಪಾದಿಸಿ ಮಾರಾಟ ಮಾಡಬಹುದು. ಇವುಗಳಿಗೆ ನೀರು, ಗೊಬ್ಬರ, ಔಷಧಿ ಸಮಸ್ಯೆಗಳು ಇರುವುದಿಲ್ಲ. ವರ್ಷಕ್ಕೆ ಎರಡು ಬಾರಿ ಬಿತ್ತನೆ ಮತ್ತು ಕಟಾವು ಮಾಡಿ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಆರ್ಥಿಕವಾಗಿ ಲಾಭ ಪಡೆಯಬಹುದು. ಇದು ಸಂಪೂರ್ಣ ಕಾಡು ಕೃಷಿಯಾಗಿದ್ದು, ಇದರಲ್ಲಿ ಅಂತರ ಬೆಳೆಯನ್ನು ಬಂಡವಾಳವಿಲ್ಲದೆ ಬೆಳೆಯಬಹುದು ಎಂದು ತಿಳಿಸಿದರು.
ಸಾವಯುವ ಕೃಷಿಕ ಅಖಿಲ್ ಮಾತನಾಡಿ, ಮನೆಗೊಂದು ನಾಟಿ ತಳಿ ಹಸುವನ್ನು ಸಾಕಿ ಕೊಂಡರೆ ಅದರಿಂದ ಬರುವ ಗಂಜಲ ಮತ್ತು ಸಗಣಿಯಿಂದ ಸಾವಯವ ಗೊಬ್ಬರವನ್ನು ತಯಾರಿಸಿ ತಮ್ಮ ಜಮೀನುಗಳಲ್ಲಿ ಉಪಯೋಗಿಸಿ ಬೇರೆಯವರಿಗೆ ಮಾರಾಟ ಮಾಡಬಹುದು. ಜಮೀನುಗಳಲ್ಲಿ ಸಿಗುವ ತ್ಯಾಜ್ಯಗಳನ್ನು ಬೆಂಕಿ ಹಚ್ಚಬೇಡಿ. ಪರಿಸರನ್ನು ಉಳಿಸಿ, ಗಿಡಮರಗಳನ್ನು ನೆಟ್ಟು ಬೆಳೆಸುವ ಮೂಲಕ ತಮ್ಮ ಜಮೀನುಗಳಲ್ಲಿ ಫಲವತ್ತತೆಯನ್ನು ಕಾಣಬೇಕು ಎಂದು ತಿಳಿಸಿದರು.
ಕೃಷಿ ಇಲಾಖೆಯ ಬಿಟಿಎಂ ಅಶ್ವಿನಿ, ಸಂಜೀವಿನಿ ಒಕ್ಕೂಟದ ಪರಹತ್ ಬಾನು, ಮಹಿಳಾ ಒಕ್ಕೂಟದ ಅಧ್ಯಕ್ಷೆ ಭಾಗ್ಯ, ಉಪಾಧ್ಯಕ್ಷೆ ಸುಧಾ, ಗ್ರಾಪಂ ಮಾಜಿ ಅಧ್ಯಕ್ಷ ಎಚ್.ಕೆ.ಬೇಬಿ, ಸಂಘದ ಸದಸ್ಯರು ಪದಾಧಿಕಾರಿಗಳು ಭಾಗವಹಿಸಿದ್ದರು.