ಹುಲಿ ಉಗುರು ಬೇಟೆ: ಈ ಕಾರಣಕ್ಕಾಗಿ ಜನರನ್ನು ಏಕಾಏಕಿ ಬಂಧಿಸುವುದು ಸರಿಯಲ್ಲ: ಆರಗ ಜ್ಞಾನೇಂದ್ರ

Araga (1)
Published on

ಬೆಂಗಳೂರು: ಹುಲಿ ಉಗುರು ಧರಿಸಿದ ಪ್ರಕರಣದಲ್ಲಿ ಸಂತೋಷ್ ಬಂಧನವಾದ ನಂತರ ಅರಣ್ಯಾಧಿಕಾರಿಗಳು ಹುಲಿ ಉಗುರು ಲಾಕೆಟ್ ಧರಿಸಿದ ಸೆಲೆಬ್ರೆಟಿಗಳಿಗೆ ನೋಟಿಸ್ ಜಾರಿ ಮಾಡಿದರು. ಇದೀಗ ಅರಣ್ಯಾಧಿಕಾರಿಗಳು ವಿವಿಧೆಡೆ ರೇಡ್​​​ಗೆ ಪ್ಲಾನ್ ಮಾಡುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆಗಳು ಆರಂಭವಾಗುತ್ತಿವೆ. ಈ ಕುರಿತು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರು ಸಹ ಸೋಶಿಯಲ್ ಮೀಡಿಯಾದಲ್ಲಿ ಟ್ವೀಟ್ ಮಾಡಿದ್ದು, ವಿಡಿಯೋ ಕೂಡ ಪೋಸ್ಟ್ ಮಾಡಿದ್ದಾರೆ.

"ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಫೋಟೋಗಳನ್ನು ನೋಡಿ ಹಿಂದೆ ಮುಂದೆ ನೋಡದೆ ಅರಣ್ಯಾಧಿಕಾರಿಗಳು ಬಂಧನಕ್ಕೊಳಪಡಿಸುತ್ತಿದ್ದಾರೆ. ಮಲೆನಾಡು ಹಾಗೂ ಕರಾವಳಿ ಬಾಗಗಳಲ್ಲಿ ಕಾಡೆಮ್ಮೆ, ಕಾಡುಕೋಣ ಮತ್ತು ಜಿಂಕೆಯ ಕೊಂಬುಗಳನ್ನು ಮನೆಯಲ್ಲಿ ಅಲಂಕಾರಕ್ಕಾಗಿ ಇಟ್ಟಿರುತ್ತಾರೆ. ಅನೇಕ ವರ್ಷಗಳ ಹಿಂದೆ ಕಾಡಿನಲ್ಲಿ ಸತ್ತಿರುವಂತಹ ಹುಲಿಗಳ ಉಗುರುಗಳನ್ನು ಮಾರಾಟ ಮಾಡುತ್ತಿದ್ದರು. ಧೈರ್ಯದ ಪ್ರತೀಕವೆಂದು ಮಕ್ಕಳು ಸೇರಿದಂತೆ ಎಲ್ಲರ ಕೊರಳಿಗೆ ಹಾಕಲಾಗುತ್ತಿತ್ತು. ಇತ್ತೀಚೆಗಂತೂ ಚಿನ್ನದ ಸರಕ್ಕೆ ಪೆಂಡೆಂಟ್ ಹಾಕಿಕೊಳ್ಳುವುದು ಸಾಮಾನ್ಯವಾಗಿದೆ. ವನ್ಯ ಜೀವಿ ಕಾಯ್ದೆ ಬರುವ ಮೊದಲು ಅದನ್ನವರು ಸಂಗ್ರಹ ಮಾಡಿರುತ್ತಾರೆ.

ಆದರೆ ಅಧಿಕಾರಿಗಳು ಅದನ್ನು ಹಿಂದೆ ಮುಂದೆ ನೋಡದೆ ಅವರನ್ನು ಅನವಶ್ಯಕವಾಗಿ ಜೈಲಿಗೆ ಹಾಕುವುದು ಏನಿದೆ. ಶಿವಮೊಗ್ಗ ಜಿಲ್ಲೆಯ ಹಣಗೆರೆ ಗ್ರಾಮದಲ್ಲಿ ಮಸೀದಿಗಳ ಇಮಾಮರು ನವಿಲುಗರಿ ಸಂಗ್ರಹಗಳಿರುತ್ತವೆ. ನವಿಲುಗರಿಯಲ್ಲಿ ಅವರು ತಲೆ ಮೇಲೆ ಹೊಡೆಯುವ ಪದ್ಧತಿಯಿದೆ.

ಇನ್ನು ಟಿಪ್ಪು ಫೋಟೋ ನೋಡಿದಾಗ ಹುಲಿಯನ್ನು ಕೊಲ್ಲುವ ದೃಶ್ಯವಿದೆ. ಅದನ್ನು ನೋಡಿ ಪ್ರೇರಣೆಯಾಗಿ ಜನ ಹುಲಿ ಬೇಟೆಯಾಡಲು ಶುರು ಮಾಡಿದರೆ...ಹಾಗೆಂದು ಹುಲಿ ಟಿಪ್ಪುವನ್ನು ಕೊಲ್ಲುವ ಫೋಟೋ ಇಟ್ಟುಕೊಂಡಿರುವವರನ್ನು ಬಂಧಿಸಲಾಗುತ್ತಾ?, ವನ್ಯ ಜೀವಿ ಕಾಯ್ದೆ ವಿರುದ್ಧ ನಾನು ಖಂಡಿತ ಮಾತನಾಡುತ್ತಿಲ್ಲ. ಕೊಲೆ ಮಾಡುವಂತದ್ದು, ಖಂಡಿತವಾಗಲೂ ಉಗ್ರರ ಕ್ರಮ.

ಮಲೆನಾಡು, ಕರಾವಳಿ ಭಾಗದ ಅನೇಕ ಮನೆಗಳಲ್ಲಿ ಹುಲಿ ಉಗುರು ಸೇರಿದಂತೆ ವನ್ಯಜೀವಿಗಳ ಉತ್ಪನ್ನಗಳನ್ನು ಇಟ್ಟುಕೊಳ್ಳುವುದು ಬಹಳ ವರ್ಷಗಳಿಂದ ನಡೆಯುತ್ತಿದೆ. ಈ ಕಾರಣಕ್ಕಾಗಿ ಜನರನ್ನು ಏಕಾಏಕಿ ಬಂಧಿಸುವುದು ಸರಿಯಲ್ಲ. ಈ ಕುರಿತು ಸರ್ಕಾರ ಮಧ್ಯಪ್ರವೇಶಿಸುವುದು ಅವಶ್ಯ‌'' ಎಂದು ಬರೆದು ಆರಗ ಜ್ಞಾನೇಂದ್ರ ಅವರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net