

ಮೈಸೂರು: ದುಷ್ಕರ್ಮಿಗಳಿಂದ ಇತ್ತೀಚೆಗೆ ಕೊಲೆಯಾದ ನಿವೃತ್ತ ಐಬಿ (ಇಂಟಲಿಜೆನ್ಸ್ ಬ್ಯೂರೋ) ಅಧಿಕಾರಿ ಆರ್.ಎನ್.ಕುಲಕರ್ಣಿ ಅವರ ನಿವಾಸಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಬುಧವಾರ ಭೇಟಿ ನೀಡಿ, ಮೃತ ಕುಲಕರ್ಣಿ ಅವರ ಪುತ್ರಿ ಪರಿಣತಾ ಕುಲಕರ್ಣಿ, ಪುತ್ರ ರೋಹನ್ ಕುಲಕರ್ಣಿ, ಅಳಿಯ ಸಂಜಯ್ ಅಂಗಡಿ ಅವರಿಗೆ ಸಾಂತ್ವನ ಹೇಳಿದರು.
ಶಾಸಕ ಎಸ್.ಎ.ರಾಮದಾಸ್, ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಡಿಸಿಪಿ ಎಂ.ಎಸ್.ಗೀತಾ ಪ್ರಸನ್ನ, ನಗರ ಪಾಲಿಕೆ ಮಾಜಿ ಸದಸ್ಯ ಜೆ.ಎಸ್.ಜಗದೀಶ್ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಕಳೆದ ಶುಕ್ರವಾರ ಸಂಜೆ ಮಾನಸಗಂಗೋತ್ರಿಯಲ್ಲಿ ಎಂದಿನಂತೆ ವಾಯುವಿಹಾರ ಮಾಡುತ್ತಿದ್ದ ವೇಳೆ ಕುಲಕರ್ಣಿ ಅವರ ಮೇಲೆ ಕಾರು ಹತ್ತಿಸಿ ಕೊಲೆ ಮಾಡಲಾಗಿತ್ತು.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಆರಗ ಜ್ಞಾನೇಂದ್ರ, ಆರ್.ಎನ್. ಕುಲಕರ್ಣಿ ಒಳ್ಳೆಯ ಅಧಿಕಾರಿಯಾಗಿದ್ದರು. ನಿವೃತ್ತಿ ಬಳಿಕ ಮೈಸೂರಿನಲ್ಲಿ ನೆಲೆಸಿದ್ದರು. ಜಾಗದ ವಿಚಾರಕ್ಕೆ ಅವರನ್ನು ಕೊಲೆ ಮಾಡಿ, ಅಪಘಾತ ಪ್ರಕರಣವೆಂದು ಬಿಂಬಿಸುವ ಯತ್ನ ನಡೆದಿತ್ತು. ಆದರೆ ಪೊಲೀಸರು ಪ್ರಕರಣವನ್ನು ಭೇದಿಸಿ ಕೊಲೆ ಎಂದು ನಿರೂಪಿಸಿದ್ದಾರೆ. ಇದಕ್ಕಾಗಿ ನಮ್ಮ ಪೊಲೀಸರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಮೈಸೂರು ನಗರವನ್ನು ನಿವೃತ್ತರ ಸ್ವರ್ಗವೆಂದು ಕರೆಯಲಾಗುತ್ತಿದ್ದು, ಇಂತಹ ಪ್ರಕರಣಗಳು ನಡೆಯದಂತೆ ನೋಡಿಕೊಳ್ಳುತ್ತೇವೆ. ಯಾವುದೇ ವ್ಯಾಜ್ಯಗಳು ಸಾವಿನಲ್ಲಿ ಕೊನೆಯಾಗಬಾರದು. ಇಂತಹ ವ್ಯಾಜ್ಯಗಳ ಮೇಲೆ ಗಮನ ವಹಿಸುವಂತೆ ಪೊಲೀಸರಿಗೆ ನಿರ್ದೇಶಿಸಿದ್ದೇನೆ ಎಂದು ತಿಳಿಸಿದರು.