ಪ್ರವೀಣ್ ಹತ್ಯೆ ನನಗೂ ನೋವುಂಟು ಮಾಡಿದೆ: ಆರಗ ಬೇಸರದ ನುಡಿ

Araga
Published on

ಶಿವಮೊಗ್ಗ: ಸರ್ಕಾರ ಮತ್ತು ನನ್ನ ವಿರುದ್ಧ ಪ್ರತಿಭಟನೆ ಮಾಡುತ್ತಿರುವವರು ನಮ್ಮವರೇ. ಅವರದ್ದು ಸಾತ್ವಿಕ ಸಿಟ್ಟು. ಈ ಪ್ರತಿಭಟನೆಯ ಹಿಂದಿನ ಉದ್ದೇಶ ಅರ್ಥ ಮಾಡಿಕೊಳ್ಳಬೇಕು. ಪ್ರವೀಣ್ ಹತ್ಯೆ ನನಗೂ ನೋವುಂಟು ಮಾಡಿದೆ. ಸರ್ಕಾರ ತ್ವರಿತ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಹರ್ಷನ ಬಳಿಕ ಪ್ರವೀಣ್ ನೆಟ್ಟಾರು ಅವರನ್ನು ಕಳೆದುಕೊಂಡಿದ್ದೇವೆ. ಪ್ರವೀಣ್ ಹತ್ಯೆ ವಿಷಯ ಕೇಳಿ ನನಗೆ ಎರಡು ದಿನ ನಿದ್ರೆಯೇ ಬರಲಿಲ್ಲ. ಹರ್ಷನ ಹತ್ಯೆ ಆರೋಪಿಗಳನ್ನು ಬಂಧಿಸಿದಂತೆ ಪ್ರವೀಣ್ ಹಂತಕರನ್ನು ಶೀಘ್ರದಲ್ಲೇ ಬಂಧಿಸುವ ವಿಶ್ವಾಸವಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೆಂಗಳೂರಿನ ನನ್ನ ನಿವಾಸದ ಮುಂದೆ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಅದು ನನ್ನ ವಿರುದ್ಧದ ಸಿಟ್ಟಲ್ಲ. ಕಾರ್ಯಕರ್ತನನ್ನು ಕಳೆದುಕೊಂಡ ನೋವು ಪ್ರತಿಭಟನಾಕಾರರನ್ನು ಕಾಡುತ್ತಿದೆ. ಹೀಗಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಪ್ರತಿಭಟನೆ ನಡೆಸಿದ್ದಾರಷ್ಟೇ ಎಂದರು.

ನಾನು ಮತ್ತು ಸಿಎಂ ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡಬೇಕೆಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಅವರು ಸಿಎಂ ಆಗಿದ್ದಾಗ ಅಷ್ಟೊಂದು ಹತ್ಯೆಗಳು ನಡೆದವು. ಟಿಪ್ಪು ಜಯಂತಿ ಮಾಡಿ ರಕ್ತ ಹರಿಸಿದವರು ಸಿದ್ದರಾಮಯ್ಯ. ಅವರು ಎಷ್ಟು ಬಾರಿ ರಾಜೀನಾಮೆ ನೀಡಿದ್ದರು ಎಂದು ಆರಗ ಜ್ಞಾನೇಂದ್ರ ಪ್ರಶ್ನಿಸಿದರು.

ಮತಾಂಧ ಶಕ್ತಿಗಳನ್ನು ಬೆಳೆಸಿದ್ದೇ ಕಾಂಗ್ರೆಸ್. ಆ ಶಕ್ತಿಗಳನ್ನು ಮಟ್ಟ ಹಾಕುವುದೇ ನಮ್ಮ ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಮತೀಯ ಶಕ್ತಿಗಳ ವಿರುದ್ಧ ದಾಖಲಾಗಿದ್ದ ಸುಮಾರು ಎರಡು ಸಾವಿರ ಪ್ರಕರಣ ಕೈ ಬಿಟ್ಟಿರು. ವೋಟ್ ಬ್ಯಾಂಕ್‌ಗಾಗಿ ಹಲವು ವರ್ಷಗಳಿಂದ ಕಾಂಗ್ರೆಸ್ ಮತೀಯ ಶಕ್ತಿಗಳ ಸಖ್ಯ ಬೆಳೆಸಿದೆ ಎಂದು ಆರೋಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net