ಆರಾದ್ರಿಮಠ ಆಧ್ಯಾತ್ಮಿಕ ಕಾರ್ಯ ಮಾದರಿ

28blh2 ನವರಾತ್ರಿ
Published on

ಬೈಲಹೊಂಗಲ: ವೇ.ಮೂ ಡಾ.ಮಹಾಂತೇಶ ಶಾಸಿ ಆರಾದ್ರಿಮಠ ಅವರ ಆಧ್ಯಾತ್ಮಿಕ, ಧಾರ್ಮಿಕ ಕಾರ್ಯ ಸಮಾಜಕ್ಕೆ ಮಾದರಿಯಾಗಿದೆ ಎಂದು ಪುರಸಭೆ ಸದಸ್ಯ ಗುರು ಮೆಟಗುಡ್ಡ ಹೇಳಿದರು.

ಪಟ್ಟಣದ ಬಸವ ನಗರದಲ್ಲಿರುವ ಶ್ರೀ ಮಾತಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ನಿರ್ದೇಶಕ ಡಾ.ಮಹಾಂತೇಶಶಾಸಿ ಅರಾದ್ರಿಮಠ ನೇತೃತ್ವದಲ್ಲಿ ಭಾನುವಾರ ಏರ್ಪಡಿಸಿದ್ದ ನವರಾತ್ರಿ ಉತ್ಸವದ ನಿಮಿತ್ತ 5ನೇ ದಿನದ ಮಹಾಚಂಡಿಕಾಯಾಗದ ಪೂರ್ಣಾಹುತಿಯಲ್ಲಿ ಸೋಮೇಶ್ವರ ಸಕ್ಕರೆ ಕಾರ್ಖಾನೆ ನಿರ್ದೇಶಕಿ, ಪತ್ನಿ ಅನಿತಾ ಮೆಟಗುಡ್ಡ ಅವರೊಂದಿಗೆ ಪಾಲ್ಗೊಂಡು ಮಾತನಾಡಿದರು.

ಕಾಯಾ, ವಾಚಾ, ಮನಸಾ ಶುದ್ಧವಾಗಿ ಶ್ರದ್ಧೆ, ಭಕ್ತಿಯಿಂದ ನವದುರ್ಗೆಯರ ಅರಾಧನೆ ಮಾಡಿದರೆ ಮಾತ್ರ ದೇವಿಯ ಅನುಗ್ರಹವಾಗಿ ಸಕಲ ಇಷ್ಟಾರ್ಥ ಸಿದ್ಧಿಯಾಗುತ್ತವೆ. ಡಾ.ಮಹಾಂತೇಶ ಶಾಸಿ ಅವರು ನಾಡಿನಲ್ಲಿ ಹಲವು ಆಧ್ಯಾತ್ಮಿಕ, ಧಾರ್ಮಿಕ ಕಾರ್ಯಗಳನ್ನು ಏರ್ಪಡಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದರು.

ತಹಸೀಲ್ದಾರ್​ ಹನುಮಂತ ಶಿರಹಟ್ಟಿ ಮಾತನಾಡಿ, ಚಂಡಿಕಾ ಯಾಗದಲ್ಲಿ ಪಾಲ್ಗೊಳ್ಳುವುದರಿಂದ ಉತ್ತಮ ಆರೋಗ್ಯ, ಮನಸ್ಸಿಗೆ ನೆಮ್ಮದಿ, ಶಾಂತಿ ಜತೆಗೆ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂದರು.

ತಹಸೀಲ್ದಾರ್​ ಹನುಮಂತ ಶಿರಹಟ್ಟಿ ದಂಪತಿ, ಪುರಸಭೆ ಸದಸ್ಯ ಗುರು ಮೆಟಗುಡ್ಡ ದಂಪತಿಯನ್ನು ಸತ್ಕರಿಸಲಾಯಿತು. ಶ್ರೀ ಮಾತಾ ದುರ್ಗಾಪರಮೇಶ್ವರಿ ದೇವಸ್ಥಾನ ಕಮಿಟಿ, ನೂರಾರು ಭಕ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net