ಶ್ರೀ ತ್ಯಾಗರಾಜರ ಆರಾಧನಾ ಮಹೋತ್ಸವ

Aradhana mahotsava of Sri Thyagaraja
Published on

ಮೈಸೂರು: ಜಿಲ್ಲಾ ಬ್ರಾಹ್ಮಣರ ಸಂಘದ ವತಿಯಿಂದ ಕೃಷ್ಣಮೂರ್ತಿಪುರಂನ ಶ್ರೀರಾಮಮಂದಿರದಲ್ಲಿ ಮಂಗಳವಾರ ಶ್ರೀ ತ್ಯಾಗರಾಜರ 177ನೇ ಆರಾಧನಾ ಮಹೋತ್ಸವ ಅಂಗವಾಗಿ ‘ಸಾಂಸ್ಕೃತಿಕ-ಸಂಗೀತ ಕ್ಷೇತ್ರದಲ್ಲಿ ಶ್ರೀ ತ್ಯಾಗರಾಜರು’ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್ ಮಾತನಾಡಿ, ತ್ಯಾಗರಾಜರು ಶ್ರೀರಾಮನ ಪ್ರೇರಣೆಯಿಂದ ಸಂಗೀತ ಕ್ಷೇತ್ರದಲ್ಲಿ ಸಾಮ್ರಾಟರಾಗಿ ಪಂಚರತ್ನ ಕೀರ್ತನೆ ಸೇರಿದಂತೆ ಸಾವಿರಾರು ಕೀರ್ತನೆಗಳನ್ನು ನೀಡಿದರು. ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದ ಆಧಾರಸ್ತಂಭವಾಗಿ ಮತ್ತು ಸಂಗೀತಕ್ಷೇತ್ರದಲ್ಲಿ ಧಾರ್ಮಿಕತೆಯ ಮನೋಭಾವ ಬೆಳಸುವಲ್ಲಿ ತ್ಯಾಗರಾಜರ ಕೊಡುಗೆ ಬಹಳಷ್ಟಿದೆ ಎಂದರು.

ತ್ಯಾಗರಾಜರು ಇಂದಿನ ಕಲಾವಿದರಿಗೆ ಆದರ್ಶ. ತಮಿಳುನಾಡಿನ ರಾಜರೊಬ್ಬರು ತ್ಯಾಗರಾಜರನ್ನು ಆಹ್ವಾನಿಸಿ ಆಸ್ಥಾನದಲ್ಲಿ ಹಾಡಬೇಕು, ಹಣ, ಜಮೀನು ಕೊಡುತ್ತೇವೆ ಎಂದು ಹೇಳಿದ್ದರು. ಆದರೆ, ಯಾವುದೇ ಆಮಿಷಕ್ಕೆ ಒಳಗಾಗದ ತ್ಯಾಗರಾಜರು, ಭಕ್ತಿ ಮುಖ್ಯ ಆಡಂಬರವಲ್ಲ ಎಂದು ಹೊರಬಂದರು ಎಂದು ಹೇಳಿದರು.

ದೇಶ ವಿದೇಶದಲ್ಲೂ ಸಹ ತ್ಯಾಗರಾಜರ ಆರಾಧನಾ ಪಂಚರತ್ನ ಕೀರ್ತನೆಗಳ ಸಮೂಹ ಗಾಯನಕ್ಕೆ ಸಹಸ್ರಾರು ಮಂದಿ ಸೇರುತ್ತಾರೆ. ಮುಂದಿನ ದಿನದಲ್ಲಿ ತ್ಯಾಗರಾಜ ಆರಾಧನಾ ಕಾರ್ಯಮವನ್ನು ತ್ಯಾಗರಾಜ ರಸ್ತೆಯಲ್ಲೇ ನೂರಾರು ಕಲಾವಿದರ ಸಮ್ಮುಖದಲ್ಲಿ ಆಯೋಜಿಸಲಾಗುವುದು ಎಂದು ಹೇಳಿದರು.

ಪ್ರಸಾದ್ ಸ್ಕೂಲ್ ಆಫ್ ರಿದಮ್ಸ್‌ನ ಹಿರಿಯ ಕಲಾವಿದ ವಿದ್ವಾನ್ ರಾಘವೇಂದ್ರ ಪ್ರಸಾದ್ ಮಾತನಾಡಿ, ಸಾಂಸ್ಕೃತಿಕ ರಾಜಧಾನಿ ಮೈಸೂರು ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಸಂಗೀತಸಂತ ತ್ಯಾಗರಾಜರಿಂದ ಪ್ರೇರಿತರಾಗಿ ಸಂಗೀತಾಭ್ಯಾಸ ಕಲಿತು ಜನಪ್ರಿಯರಾದವರು ಬಹಳಷ್ಟಿದ್ದಾರೆ. ನೂರಾರು ವರ್ಷಗಳ ಹಿಂದೆ ಮೈಸೂರು ಸಂಸ್ಥಾನದ ತ್ಯಾಗರಾಜ ರಸ್ತೆಯ ಸುತ್ತಮುತ್ತಲಿನ ಬಡಾವಣೆಯ ಇತಿಹಾಸವನ್ನು ನೋಡುವುದಾದರೆ ವಿದ್ವಾಂಸರು, ಅರಮನೆ ಪಂಡಿತರು, ಪಕ್ಕವಾದ್ಯ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು. ಆ ಪರಂಪರೆಯನ್ನು ಉಳಿಸಿ ಬೆಳಸುವಲ್ಲಿ ಸರ್ಕಾರಗಳು ಇಂತಹ ಮಹನೀಯರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಹೇಳಿದರು.

ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಮಾಜಿ ನಿರ್ದೇಶಕರಾದ ಎಂ.ಆರ್. ಬಾಲಕೃಷ್ಣ, ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಸಂಘಟನಾ ಕಾರ್ಯದರ್ಶಿ ಅಜಯ್‌ಶಾಸ್ತ್ರಿ, ಹೊಯ್ಸಳ ಕರ್ನಾಟಕದ ನಿರ್ದೇಶಕ ವಿ.ಹರೀಶ್, ವಿಜಯ್ ಕುಮಾರ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net