ಶಂಕರಾಚಾರ್ಯರ ಆರಾಧನಾ ಮಹೋತ್ಸವ

20kkr1(5-24
ಕಿಕ್ಕೇರಿಯಲ್ಲಿ ಶಂಕರಾಚಾರ್ಯರರ ಭಾವಚಿತ್ರ ಮೆರವಣಿಗೆಯೊಂದಿಗೆ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
Published on

ಕಿಕ್ಕೇರಿ: ಶಂಕರಾಚಾರ್ಯರು ಹಿಂದು ಧರ್ಮ ಉದ್ಧಾರಕರಾಗಿ ತಮ್ಮ ಅತ್ಯಲ್ಪ ಜೀವಿತಾವಧಿಯಲ್ಲಿ ಮಾಡಿದ ಕೈಂಕರ್ಯದಿಂದ ಭರತಖಂಡ ನೆಮ್ಮದಿ ಕಾಣುವಂತಾಗಿದೆ ಎಂದು ವೇದಬ್ರಹ್ಮ ಅನಿಲ್‌ಶಾಸ್ತ್ರೀ ತಿಳಿಸಿದರು.

ಇಲ್ಲಿನ ವಿಪ್ರಬಾಂಧವ ಸೇವಾ ಸಮಿತಿ ವತಿಯಿಂದ ಭಾನುವಾರ ಏರ್ಪಡಿಸಿದ್ದ ಆರಾಧನಾ ಮಹೋತ್ಸವದಲ್ಲಿ ಮಾತನಾಡಿ, ಹಿಂದು ಧರ್ಮ ಅವನತಿ ಹಾದಿಯಲ್ಲಿ ಸಾಗುತ್ತಿರುವಾಗ ಶಂಕರರು ದೇವಾಂಶ ಸಂಭೂತರಾಗಿ ಅವತರಿಸಿದರು. ಆಚಾರ್ಯತ್ರಯರಾಗಿ ಸನಾತನ ಸಂಸ್ಕೃತಿ ಉಳಿಸಲು ದೇಶವನ್ನು ಕಾಲ್ನಡಿಗೆಯಲ್ಲಿ ಪರ್ಯಟನೆ ಮಾಡಿದರು. ಭರತಖಂಡದ ನಾಲ್ಕು ದಿಕ್ಕುಗಳಲ್ಲಿ ಶಕ್ತಿಪೀಠ, ಮಠಗಳನ್ನು ಸ್ಥಾಪಿಸಿದರು. ಇವರ ರಚನೆಯ ಬ್ರಹ್ಮಸೂತ್ರದಭಾಷ್ಯ, ಉಪನಿಷತ್‌ಭಾಷ್ಯ ಭಜಗೋವಿಂದಂ, ಸೌಂದರ್ಯಲಹರಿ ಸ್ತ್ರೋತ್ರಗಳು ವಿಶ್ವವ್ಯಾಪಿ ಪ್ರಸಿದ್ಧವಾಗಿವೆ. ಅದ್ವೈತ ಸಿದ್ಧಾಂತದ ಮೂಲಕ ಭಗವಂತನ ಸಾಕ್ಷಾತ್ಕಾರ ಮಾಡಿದ ಯುಗಪುರುಷರು ಎಂದರು.

ಬದುಕಿದ್ದು ಅತ್ಯಲ್ಪ ಅವಧಿಯಾದರೂ ವೇದ, ಶಾಸ್ತ್ರಗಳಲ್ಲಿ ಪಾಂಡಿತ್ಯ ಪಡೆದರು. ವೇದ, ಪೌರೋಹಿತ್ಯ ಎಲ್ಲ ವರ್ಣಕ್ಕೆ ಸೇರಿದೆ ಎಂದು ಮೇಳು, ಕೀಳು ಎಂಬ ಭಾವನೆ ವ್ಯರ್ಜಿಸಲು ತಿಳಿಸಿದರು.

ಸಪ್ತಾಹದ ಅಂತಿಮ ದಿನವಾದ ಭಾನುವಾರ ಸಾಮೂಹಿವಾಗಿ ವಿಪ್ರರು ಪಾದುಕೆ ಪೂಜೆ ಸಲ್ಲಿಸಿದರು. ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ಸೇವೆ ನಡೆಯಿತು. ಮಹಿಳೆಯರು ಭಜಗೋವಿಂದಂ ಕೀರ್ತನೆ, ಸೌಂದರ್ಯಲಹರಿ ಸ್ತ್ರೋತ್ರಗಳನ್ನು ಪಠಿಸಿದರು. ಸಪ್ತಾಹ ಕಾರ್ಯಕ್ರಮಕ್ಕೆ ಸಹಕರಿಸಿದ ಗಣ್ಯರನ್ನು ಗೌರವಿಸಲಾಯಿತು.

ಆರಾಧನಾ ಮಹೋತ್ಸವದ ಅಂಗವಾಗಿ ಪ್ರಮುಖ ಬೀದಿಯಲ್ಲಿ ಶಂಕರರ ಭಾವಚಿತ್ರಕ್ಕೆ ಪುಷ್ಪಗಳಿಂದ ಅಲಂಕರಿಸಿ ಮೆರವಣಿಗೆ ಮಾಡಲಾಯಿತು. ಜಾಗಟೆ, ಮಂಗಳವಾದ್ಯದೊಂದಿಗೆ ಮೆರವಣಿಗೆ ಸಾಗಿತು. ಮಹಿಳೆಯರು ಶಂಕರ ನಾಮಪಠಣೆ ಮಾಡುತ್ತ ಮೆರವಣಿಗೆಯಲ್ಲಿ ಸಾಗಿದರು. ಶಂಕರರ ಭಾವಚಿತ್ರಕ್ಕೆ ಮಹಾಮಂಗಳಾರತಿ ಸಲ್ಲಿಸಲಾಯಿತು. ತೀರ್ಥ, ಅಕ್ಷತೆ, ಪುಷ್ಪ ಪ್ರಸಾದ ವಿತರಿಸಲಾಯಿತು. ಅನ್ನದಾಸೋಹ ಹಮ್ಮಿಕೊಳ್ಳಲಾಗಿತ್ತು. ಶಂಕರರ ಪಾದುಕೆಗೆ ಸರತಿಯಲ್ಲಿ ನಿಂತು ಪೂಜಿಸಲಾಯಿತು.

ಕೆ.ಬಿ.ವೆಂಕಟೇಶ್, ಕೆ.ಎಸ್. ಅನಂತಸ್ವಾಮಿ, ನರಸಿಂಹ, ಮಹಾಬಲಶರ್ಮ, ಮಹಾಬಲರಾವ್, ಕೆ.ಎಸ್. ಪರಮೇಶ್ವರಯ್ಯ, ಡಾ. ಕೆ.ಎಸ್. ನಂಜುಂಡಸ್ವಾಮಿ, ಕೆ.ಎಸ್. ಸತ್ಯನಾರಾಯಣ, ಸೀತಾರಾಂ, ನಾಗೇಂದ್ರ, ರಾಮಣ್ಣ ಮಾಸ್ಟರ್, ಶ್ರೀಹರಿ, ಗಣೇಶರಾವ್, ಗಿರಿಜಮ್ಮ, ಸ್ವರ್ಣ, ಮೇಘಶ್ರೀ, ಸುಮಾ, ರತ್ನಮ್ಮ, ನಾಗರತ್ನಮ್ಮ, ನಂದಿನಿ, ಗೌರಮ್ಮ, ಸರಸ್ವತಿ, ಭಾಗ್ಯಮ್ಮ, ರಜಿನಿ, ಕಲಾವತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net