

ಸೋಮವಾರಪೇಟೆ: ಪ್ರಸಕ್ತ ಸಾಲಿನ ಮುಂಗಾರಿನಲ್ಲಿ ವಾಡಿಕೆಗಿಂತ ದುಪ್ಪಟ್ಟು ಮಳೆ ಬಿದ್ದ ಪರಿಣಾಮ ತಾಲೂಕಿನಲ್ಲಿ ಅರೇಬಿಕಾ ಕಾಫಿ ಬೆಳೆಗಾರರು ಕಾಫಿ ಫಸಲು ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ.
ಇಂತಹ ಆತಂಕದ ಸಂದರ್ಭದಲ್ಲೇ ಬಿಳಿಕಾಂಡಕೊರಕ ರೋಗಬಾಧೆಗೆ ಕಾಫಿ ಗಿಡಗಳು ಸಾಯುತ್ತಿದ್ದು, ರೋಗಪೀಡಿತ ಗಿಡಗಳ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತಿದೆ. ಕಾಫಿ ಬೆಳೆಗಾರರು ರೋಗಪೀಡಿತ ಗಿಡಗಳನ್ನು ಗುರುತಿಸಿ ಕಿತ್ತು ನಾಶಪಡಿಸುತ್ತಿದ್ದಾರೆ.
ತಾಲೂಕಿನಲ್ಲಿ ಹೆಚ್ಚು ಅರೇಬಿಕಾ ಕಾಫಿ ಬೆಳೆಯುತ್ತಿದ್ದು, ಪ್ರಸಕ್ತ ವರ್ಷ ಶೇ.70ರಷ್ಟು ಕಾಫಿ ಫಸಲು ಹಾನಿಯಾಗಿದೆ. ಕೂಡಲೇ ವೈಜ್ಞಾನಿಕ ಸರ್ವೇ ನಡೆಸಿ, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್‌ನಿಂದ ಸೂಕ್ತ ಪರಿಹಾರ ನೀಡಬೇಕು. ಕಾಫಿ ಪುನಶ್ಚೇತನಕ್ಕೆ ವಿಶೇಷ ಪ್ಯಾಕೇಜ್ ನೀಡಬೇಕೆಂದು ಸೋಮವಾರಪೇಟೆ ತಾಲೂಕು ಕಾಫಿ ಬೆಳೆಗಾರರು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದ್ದಾರೆ.
ಮಳೆಯಿಂದ ಕಾಫಿ ತೋಟಗಳು ಶೀತಪೀಡಿತವಾಗಿದ್ದು, ಎಲೆಚುಕ್ಕಿರೋಗ, ಕೊಳೆರೋಗದಿಂದ ಎಲೆಗಳು ಉದುರುತ್ತಿವೆ. ಬಿಳಿಕಾಂಡಕೊರಕ ಕಾಂಡಗಳನ್ನು ಕೊರೆದಿರುವ ಪರಿಣಾಮ ಗಿಡಗಳು ಸಾಯುತ್ತಿವೆ. ಸತ್ತ ಗಿಡಗಳಲಿದ್ದ ಕಾಫಿ ಕಾಳು ಮಣ್ಣು ಪಾಲಾಗುತ್ತಿದೆ ಎಂದು ಬೆಳೆಗಾರರು ಸಂಕಷ್ಟ ತೋಡಿಕೊಂಡಿದ್ದಾರೆ.
ನಷ್ಟ ಅನುಭವಿಸಬೇಕು: ಕಾಫಿ ತೋಟಗಳಲ್ಲಿ ಬಿಳಿಕಾಂಡಕೊರಕ (ಕ್ಸೈಲೋಟ್ರೀಕಸ್‌ಕ್ವಾಡ್ರಿಪಸ್) ಕೀಟಬಾಧೆಗೆ ತುತ್ತಾದ ಕಾಫಿ ಗಿಡಗಳ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತಿದ್ದು, ಬೆಳೆಗಾರರು ರೋಗಪೀಡಿತ ಗಿಡಗಳನ್ನು ಹುಡುಕಿ ಕಿತ್ತು ಬೆಂಕಿಕೊಟ್ಟು ನಾಶ ಮಾಡಬೇಕು. ತಪ್ಪಿದಲ್ಲಿ ಗಿಡಗಳಲ್ಲಿದ್ದ ಕೀಟಗಳು ಹಾರಿ ಅರೋಗ್ಯವಂತ ಗಿಡಗಳ ಕಾಂಡ ಸೇರಿಕೊಂಡು ಆ ಗಿಡವನ್ನು ನಾಶಮಾಡುತ್ತವೆ. ಈ ಕಾರಣದಿಂದ ಗಿಡಗಳನ್ನು ಕೂಡಲೇ ನಾಶಪಡಿಸಬೇಕು. ಕಿತ್ತ ಗಿಡಗಳನ್ನು ಮಾರಾಟ ಮಾಡಲು ಸಂಗ್ರಹ ಮಾಡಬಾರದು ಎಂದು ಕಾಫಿ ಮಂಡಳಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಬಿಳಿಕಾಂಡಕೊರಕ ಕಾಫಿ ಗಿಡದ ಕಾಂಡವನ್ನು ಕೊರೆದು ತಿನ್ನುತ್ತಿರುವುದರಿಂದ ಹತ್ತು ವರ್ಷಗಳ ಹಳೆಯದಾದ ಗಿಡಗಳು ಸಾಯುತ್ತಿದ್ದು, ಬೆಳೆಗಾರರು ಆರ್ಥಿಕ ನಷ್ಟ ಅನುಭವಿಸಬೇಕಾಗಿದೆ. ಹೊಸದಾಗಿ ಕಾಫಿ ಗಿಡ ನೆಟ್ಟು ಫಸಲು ತೆಗೆಯಬೇಕಾದರೆ ನಾಲ್ಕರಿಂದ ಐದು ವರ್ಷ ಬೇಕಾಗುತ್ತದೆ.
ಉತ್ತಮ ಬೆಲೆ: ಜಿಲ್ಲೆಯ ಮಟ್ಟಿಗೆ ಹೆಚ್ಚು ಅರೇಬಿಕಾ ಕಾಫಿ ಬೆಳೆಯುವ ಸೋಮವಾರಪೇಟೆ ತಾಲೂಕಿನಲ್ಲಿ ್ತ 50 ಕೆ.ಜಿ. ತೂಕದ ಅರೇಬಿಕಾ ಪಾರ್ಚ್‌ಮೆಂಟ್‌ಗೆ 16,200 ರೂ. ಹಾಗೂ ಅರೇಬಿಕಾ ಚೆರ‌್ರಿಗೆ 10,500 ರೂ. ಬೆಲೆಯಿದೆ. ಎಕರೆಯೊಂದರಲ್ಲಿ 600 ರಿಂದ 700 ಕಾಫಿ ಗಿಡಗಳು ಇದ್ದರೆ, ಅದರಲ್ಲಿ ಫಸಲು ಕೊಡುವ 30 ರಿಂದ 50 ಗಿಡಗಳು ಕಾಂಡಕೊರಕ ಕೀಟಬಾಧೆಗೆ ತುತ್ತಾಗುತ್ತಿವೆ. ಶನಿವಾರಸಂತೆ, ಕೊಡ್ಲಿಪೇಟೆ, ಸೋಮವಾರಪೇಟೆ, ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಕಾಫಿ ತೋಟದಲ್ಲಿ ಕಾಂಡಕೊರಕ ಕೀಟಬಾಧೆ ಹೆಚ್ಚಾಗಿದೆ.
ಕೀಟ ನಿಯಂತ್ರಣ ಕ್ರಮ: ಪ್ರತಿ ವರ್ಷ ಫೆಬ್ರವರಿ, ಮಾರ್ಚ್, ಏಪ್ರಿಲ್, ಮೇ, ಸೆಪ್ಟೆಂಬರ್, ಅಕ್ಟೋಬರ್‌ನಲ್ಲಿ ಕೀಟ ಪೀಡಿತ ಗಿಡಗಳನ್ನು ಕಿತ್ತು ಸುಡಬೇಕು. ಅರೋಗ್ಯವಂತ ಗಿಡಗಳ ಕಾಂಡಗಳಿಗೆ ಕ್ರಿಮಿನಾಶಕ ಸಿಂಪಡಿಸಬೇಕು. ತೋಟಗಳಲ್ಲಿ ಹದವಾದ ನೆರಳು ನಿರ್ವಹಣೆ ಮಾಡಿಕೊಳ್ಳಬೇಕು. ಕೀಟತಜ್ಞರ ಸಲಹೆ ಪಡೆದು ಕ್ರಿಮಿನಾಶಕ ಆಯ್ಕೆ ಮಾಡಿಕೊಳ್ಳಬೇಕು.
ಫಸಲು ಇರುವ ಗಿಡಗಳಿಗೆ ಕೀಟಬಾಧೆಯಿದ್ದರೆ ಫಸಲು ತೆಗೆಯುವ ತನಕ ಗಿಡವನ್ನು ರಕ್ಷಿಸಿಕೊಳ್ಳಲು ಕೀಟನಿಯಂತ್ರಣದ ಬಟ್ಟೆಯನ್ನು ಕಾಂಡಗಳಿಗೆ ಸುತ್ತಿ, ಒಂದು ಬ್ಯಾರೆಲ್‌ಗೆ 700 ಮಿ.ಲೀ. ಕ್ಲೋರೋಫೈರಿಪಾಸ್ ಅಥವಾ 400 ಮಿ.ಲೀ. ಆಮ್ಲ ಕೀಟನಾಶಕವನ್ನು ಮಿಶ್ರಣ ಮಾಡಿ ಬಟ್ಟೆಗೆ ಹಾಕಬೇಕು. ಈ ಕ್ರಮದಿಂದ ಕಾಂಡದೊಳಗಿರುವ ಕೀಟ ಸಾಯುತ್ತದೆ.
ಒಟ್ಟಿನಲ್ಲಿ ಕಾಫಿ ಬೆಳೆಗಾರರು ಎಷ್ಟೇ ಮುನ್ನೆಚ್ಚರಿಕೆ ವಹಿಸಿದರೂ ಹವಾಮಾನ ಬದಲಾವಣೆಯಿಂದ ಬಿಳಿಕಾಂಡಕೊರಕ ರೋಗ ಹೆಚ್ಚುತ್ತಿದೆ. ಕಾಫಿ ತೋಟಗಳಿಗೆ ಬೀಳುವ ಅತಿಯಾದ ಬಿಸಿಲು, ಸಮಯಕ್ಕೆ ಸರಿಯಾಗಿ ಮಳೆ ಬೀಳದಿರುವುದು, ಕಾಫಿ ತೋಟಗಳಲ್ಲಿ ಸಾಮೂಹಿಕ ನಿರ್ವಹಣೆ ಕೊರತೆಯಿಂದ ಕಾಂಡಕೊರಕ ಕೀಟಗಳ ಹಾವಳಿ ಜಾಸ್ತಿಯಾಗಿದೆ.
ಅರೇಬಿಕಾ ಕಾಫಿ ಹೆಚ್ಚು: ಜಿಲ್ಲೆಯಲ್ಲಿ 1,02,525 ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ಬೆಳೆಯಲಾಗುತ್ತಿದ್ದು, 74,495 ಹೆಕ್ಟೇರ್‌ನಲ್ಲಿ ರೋಬಸ್ಟಾ, 28,030 ಹೆಕ್ಟೇರ್‌ನಲ್ಲಿ ಅರೇಬಿಕಾ ಕಾಫಿ ಬೆಳೆಯಲಾಗುತ್ತಿದೆ. ಸೋಮವಾರಪೇಟೆ ತಾಲೂಕಿನಲ್ಲಿ ಒಟ್ಟು 28,540ಹೆ. ನಲ್ಲಿ ಕಾಫಿ ಬೆಳೆಯಲಾಗುತ್ತಿದೆ. ಅರೇಬಿಕಾ ಕಾಫಿ ಬೆಳೆಯಲು ಸೂಕ್ತ ಪ್ರದೇಶವಾಗಿರುವುದರಿಂದ 22,940ಹೆ. ನಲ್ಲಿ ಅರೇಬಿಕಾ, 5,600 ಹೆ.ನಲ್ಲಿ ರೋಬಾಸ್ಟಾ ಬೆಳೆಯಲಾಗುತ್ತಿದೆ.
ರೋಗಪೀಡಿತ ಗಿಡಗಳನ್ನು ಕಿತ್ತು ಕೂಡಲೇ ಕಾಂಡಗಳನ್ನು ಸುಟ್ಟು ನಾಶ ಮಾಡಬೇಕು. ಅಥವಾ ನೀರಿನ ಹೊಂಡಗಳಲ್ಲಿ 20 ದಿನಗಳ ಕಾಲ ಕಾಂಡಗಳನ್ನು ಮುಳುಗಿಸಿ ಇಡಬೇಕು. ನಂತರ ತೆಗೆದು ಉಪಯೋಗಿಸಬಹುದು. ಕೀಟಪೀಡಿತ ಕಾಂಡಗಳನ್ನು ರಸ್ತೆ ಬದಿಯಲ್ಲಿ ಸಂಗ್ರಹ ಮಾಡಿದರೆ ಕೀಟಗಳು ಹಾರಿ ಇನ್ನೊಂದು ಅರೋಗ್ಯವಂತ ಗಿಡಗಳಿಗೆ ಸೇರಿಕೊಳ್ಳುತ್ತದೆ. ಬೆಳೆಗಾರರು ಸಾಮೂಹಿಕವಾಗಿ ರೋಗಪೀಡಿತ ಗಿಡಗಳನ್ನು ಕಿತ್ತು ಕೀಟಗಳನ್ನು ನಾಶ ಮಾಡಬೇಕು. ಬೆಳೆಗಾರರು ನೆರಳು ನಿರ್ವಹಣೆಯನ್ನು ಸೂಕ್ತ ಸಮಯದಲ್ಲೇ ಮಾಡಬೇಕು. ಹದವಾದ ನೆರಳು ಇದ್ದರೆ ಕಾಫಿ ಗಿಡಗಳು ಅರೋಗ್ಯವಾಗಿರುತ್ತವೆ.
1-ಡಾ.ಚಂದ್ರಶೇಖರ್ ಉಪನಿರ್ದೇಶಕ, ಕಾಫಿ ಮಂಡಳಿ