ಮತದಾನ ನಡೆದ ರಾತ್ರಿಯೇ ಅಭ್ಯರ್ಥಿ ಸಾವು, ಬದುಕಿಲ್ಲದಿದ್ದರೂ ಒಲಿದ ಗೆಲುವು!

death
Published on

ದಾವಣಗೆರೆ: ಗ್ರಾಮ ಪಂಚಾಯಿತಿ ಚುನಾವಣೆ ಮತದಾನ ನಡೆದ ರಾತ್ರಿಯೇ ಹೃದಯಾಘಾತದಿಂದ ಸಾವಿಗೀಡಾದ ಅಭ್ಯರ್ಥಿಯೇ ಗೆಲವು ಸಾಧಿಸಿದ್ದಾರೆ. ಇಂದು ಮತ ಎಣಿಕೆ ನಡೆದಿದ್ದು, ಗೆಲುವು ಮೃತ ಅಭ್ಯರ್ಥಿಯದ್ದೇ ಆಗಿದೆ. ಆದರೆ ಗೆಲುವನ್ನ ಸಂಭ್ರಮ ಇದೀಗ ಅವರೇ ಇಲ್ಲ!

ಇಂತಹ ಘಟನೆ ಹೊನ್ನಾಳಿ ತಾಲೂಕಿನ ಅರಬಗಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಂಕದಕಟ್ಟ ಗ್ರಾಮದಲ್ಲಿ ಸಂಭವಿಸಿದೆ. ಚುನಾವಣೆಗೆ ಸ್ಪರ್ಧಿಸಿದ್ದ ಡಿ.ಬಸಪ್ಪ(72) ಮೃತಪಟ್ಟಿದ್ದು, ಇವರೇ ಗೆಲುವು ಸಾಧಿಸಿದ್ದಾರೆ.

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ 5 ಬಾರಿ‌ ಗೆಲುವು ಸಾಧಿಸಿ 6ನೇ ಬಾರಿ ಅದೃಷ್ಟ ಪರೀಕ್ಷೆಗೆ ಬಸಪ್ಪ, ಮತದಾನದ ದಿನ ಬೆಳಗಿನಿಂದ ಸಂಜೆವರೆಗೂ ಮತಗಟ್ಟೆ ಬಳಿಯೇ ಇದ್ದರು. ಅಂದು ಸಂಜೆ ಹೊನ್ನಾಳಿಗೆ ಹೋಗಿ ರಾತ್ರಿ ಗ್ರಾಮಕ್ಕೆ ತೆರಳುತ್ತಿದ್ದ ಮಾರ್ಗಮಧ್ಯೆ ವಾಂತಿ, ಎದೆನೋವಿನಿಂದ ಕುಸಿದುಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಮತದಾನ ಪೂರ್ಣಗೊಂಡು ಫಲಿತಾಂಶ ಪ್ರಕಟವಾಗುವ ಮುನ್ನವೇ ಇಹಲೋಕ ಯಾತ್ರೆ ಪೂರ್ಣಗೊಳಿಸಿದ್ದ ಅವರಿಗೆ ಚುನಾವಣೆಯಲ್ಲಿ ಗೆಲುವು ಸಿಕ್ಕಿದೆಯಾದರೂ ಸಂಭ್ರಮಿಸಿಸಲು ಅವರೇ ಇಲ್ಲ. ಮೃತರಿಗೆ ಪತ್ನಿ, ಮೂವರು ಪುತ್ರರು. ಬಸಪ್ಪ ಅವರ ಸ್ಥಾನ ಉಪಚುನಾವಣೆ ನಡೆಯಲಿದೆ.

ಇಂತಹದ್ದೇ ಮತ್ತೊಂದು ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಸಂಭವಿಸಿದೆ. ಈ ಪಂಚಾಯಿತಿಗೆ ಡಿ.22 ರಂದು ಮತದಾನ ನಡೆದಿತ್ತು. ಚುನಾವಣೆಗೆ ಸ್ಪರ್ಧಿಸಿದ್ದ ಸಿ.ಬಿ. ಅಂಬೋಜಿ ಅವರು ಡಿ.27ರಂದು ಮೃತಪಟ್ಟಿದ್ದರು. ಫಲಿತಾಂಶದಲ್ಲಿ ಅವರು ಗೆಲುವು ಸಾಧಿಸಿದ್ದಾರೆ. ಈಗ ಈ ಕ್ಷೇತ್ರಕ್ಕೂ ಉಪಚುನಾವಣೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net