ದೇಶದಲ್ಲಿ ಉತ್ಪಾದನೆಗೆ ವಿಪುಲ ಅವಕಾಶ,  ಏಕಸ್ ಚೇರ್ಮನ್ ಅರವಿಂದ ಮೆಳ್ಳಿಗೇರಿ ಅಭಿಮತ,    ಕೆಎಲ್ಇ ತಾಂತ್ರಿಕ ವಿವಿ ಗೌರವ ಡಾಕ್ಟರೇಟ್ ಸ್ವೀಕಾರ

IMG-20241218-WA0010-1.jpg
Published on

ಹುಬ್ಬಳ್ಳಿ: ಇಂಜಿನಿಯರಿಂಗ್ ಪದವಿ ಮಾಡಿದವರು ಬಹಳಷ್ಟು ಜನರು ಇರಬಹುದು. ಆದರೆ, ನಿಮ್ಮದೇ ಕ್ಷೇತ್ರದಲ್ಲಿ ನೀವು ಹೇಗೆ ವಿಭಿನ್ನ ಎನ್ನುವುದನ್ನು ಕಂಡುಕೊಂಡರೆ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನೆಲೆ ನಿಂತು ಗುರುತಿಸಿಕೊಳ್ಳಬಹುದು ಎಂದು ಏಕಸ್ ಚೇರ್ಮನ್ ಅರವಿಂದ ಮೆಳ್ಳಿಗೇರಿ ಅಭಿಪ್ರಾಯಪಟ್ಟರು.

ಇಲ್ಲಿಯ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಬುಧವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಸಂಸ್ಥೆಯಿಂದ ನೀಡಲಾದ ಗೌರವ ಡಾಕ್ಟರೇಟ್ ಸ್ವೀಕರಿಸಿ ಅವರು ಮಾತನಾಡಿದರು.

ದೇಶದಲ್ಲಿ ಉತ್ಪಾದನೆ ವಲಯಕ್ಕೆ ಭವಿಷಯವಿದೆ. ಉದ್ಯಮಶೀಲಗುಣ ಬೆಳೆಸಿಕೊಂಡಾಗ ಸಮಾಜಕ್ಕೆ ನಿಮ್ಮಿಂದಾದ ಕೊಡುಗೆ ನೀಡಬಹುದು. ಉತ್ಪಾದನೆಗೆ ಸಾಕಷ್ಟು ಬೇಡಿಕೆ ಇದೆ. ಇಲ್ಲಿ ಹಲವು ಉದ್ಯೋಗಾವಕಾಶಗಳು ಇವೆ. ಈ ಬಗ್ಗೆ ಉನ್ನತ ವ್ಯಾಸಂಗ ಮಾಡುವವರು ಗಮನ ಹರಿಸಬೇಕು. ಉತ್ಪಾದನೆಗೆ ಆದ್ಯತೆ ನೀಡಿದರೆ ಭಾರತ ಎದುರಿಸುತ್ತಿರುವ ನಿರುದ್ಯೋಗವನ್ನು ಕಡಿಮೆ ಮಾಡಬಹುದು ಎಂದು ಹೇಳಿದರು.

ಪ್ರತಿಯೊಬ್ಬರ ಬೆಳವಣಿಗೆಯಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಬಹಳಷ್ಟು ಮಹತ್ವದ್ದಾಗಿದೆ. ಬದುಕಿಗೆ ಬದಲಾವಣೆ ತರುತ್ತವೆ. ಇದೇ ರೀತಿ ನನ್ನ ಬದುಕಿನಲ್ಲಿಯೂ ಕೂಡ ಕೆಎಲ್ಇ ಸಂಸ್ಥೆಯ ಕೊಡುಗೆ ಬಹಳಷ್ಟಿದೆ, ವಿದ್ಯಾರ್ಥಿ ಜೀವನದಲ್ಲಿ ನಿಮ್ಮಆಸಕ್ತಿಯ ಕ್ಷೇತ್ರದತ್ತ ಒಲವು ತೋರಬೇಕು ಎಂದು ಸಲಹೆ ನೀಡಿದರು.

ಹುಬ್ಬಳ್ಳಿಯ ಹೊಸೂರ ಸರ್ಕಾರಿ ಕನ್ನಡ ಶಾಲೆಯಲ್ಲಿ ಪ್ರಾಥಮಿಕ, ಲ್ಯಾಮಿಂಗ್ಟನ್ ನಲ್ಲಿ ಪ್ರೌಢ ಶಿಕ್ಷಣ, ಪಿ.ಸಿ. ಜಾಬಿನ್ ಕಾಲೇಜಿನಲ್ಲಿ ಪಿಯು ಸೈನ್ಸ್ ವಿದ್ಯಾಭ್ಯಾಸ ಮಾಡಿದೆ ಎಂದ ಅವರು, ಆಗ ತಮಗೆ ಕಲಿಸಿದ ಗುರುಗಳನ್ನು ಸ್ಮರಿಸಿದರು.

ಬೆಳಗಾವಿ ಏರೋಸ್ಪೇಸ್ ಗೆ ಸೂಕ್ತ ಜಾಗ ಎಂಬುದನ್ನು ಅರಿತು ಅಲ್ಲಿ ಉತ್ಪಾದನೆಗೆ ಮುಂದಾಗಿದ್ದೇವೆ. ಹುಬ್ಬಳ್ಳಿಯಲ್ಲಿ ಗ್ರಾಹಕರ ವಸ್ತುಗಳ ಉತ್ಪಾದನೆಗೆ ಆದ್ಯತೆ ನೀಡಲಾಗಿದೆ. ಎರಡೂ ಕಡೆ ಸೇರಿ ಆರು ಸಾವಿರ ಜನರು ಕೆಲಸ ಮಾಡುತ್ತಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ಸುಮಾರು 20 ಸಾವಿರ ಇಂಜಿನಿಯರ್ಗಳ ಅವಶ್ಯಕತೆ ಕಂಪನಿಗೆ ಬೀಳಬಹುದು ಎಂದು ಭವಿಷ್ಯದ ಯೋಜನೆಗಳನ್ನು ತಿಳಿಸಿದರು.

ವಾರಕ್ಕೆ ನೂರು ಗಂಟೆ ಕೆಲಸ ಮಾಡಬೇಕೆನ್ನುವುದು ನನ್ನ ವಾದ. ಇದರಿಂದ ದೇಶದ ಉತ್ಪಾದನೆ ಹೆಚ್ಚುತ್ತದೆ. ಉತ್ಪಾದನೆ ವಲಯಕ್ಕೆ ಉತ್ತೇಜನ ಸಿಕ್ಕಂತಾಗುತ್ತದೆ. ಜಗತ್ತಿನ ಜತೆ ನಾವು ಸ್ಪರ್ಧೆಗೆ ಇಳಿಯಬಹುದು ಎಂದು ಮೆಳ್ಳಿಗೇರಿ ಪ್ರತಿಪಾದಿಸಿದರು.

ಕೆಎಲ್ಇ ತಾಂತ್ರಿಕ ವಿವಿ ಕುಲಾಧಿಪತಿ ಡಾ. ಪ್ರಭಾಕರ ಕೋರೆ ಮಾತನಾಡಿ, ಕೆಎಲ್ಇ ಸಂಸ್ಥೆಯ ಹಳೇ ವಿದ್ಯಾರ್ಥಿಯೂ ಆಗಿರುವ ಅರವಿಂದ ಮೆಳ್ಳಿಗೇರಿ ಅವರಿಗೆ ಗೌರವ ಡಾಕ್ಟರೇಟ್ ನೀಡಿರುವುದು ಅತ್ಯಂತ ಸೂಕ್ತವಾಗಿದೆ. ಇದು ಸಂತೋಷದ ಕ್ಷಣ ಎಂದರು.

ಮಾತೃಭಾಷೆಯಲ್ಲಿ ಕಲಿತವರೇ ದೊಡ್ಡ ವ್ಯಕ್ತಿಗಳಾಗಿ ಬೆಳೆದಿರುವುದನ್ನು ಎಲ್ಲೆಡೆ ಕಾಣುತ್ತೇವೆ. ವಿದ್ಯೆ ಕಲಿತ ನಂತರ ಕೇವಲ ನೌಕರಿಗೆ ಆಸೆ ಪಡುವ ಬದಲು ಒಂದಿಷ್ಟು ಜನರಿಗೆ ಉದ್ಯೋಗ ಕೊಡುವ ಉದ್ಯಮಿಯಾಗುವತ್ತ ಗಮನ ಹರಿಸಬೇಕು ಎಂದರು.

ವಿವಿ ಕುಲಸಚಿವ ಡಾ. ಬಸವರಾಜ ಅನಾಮಿ, ಕೆಎಲ್ಇ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ, ಪ್ರವೀಣ ಬಾಗೇವಾಡಿ ಇತರರು ಉಪಸ್ಥಿತರಿದ್ದರು.
ಕುಲಪತಿ ಡಾ. ಪ್ರಕಾಶ ತೆವರಿ ಸ್ವಾಗತಿಸಿದರು. ವಿವಿ ಸಮಕುಲಾಧಿಪತಿ ಡಾ. ಅಶೋಕ ಶೆಟ್ಟರ್ ಪರಿಚಯಿಸಿದರು. ಕೊಟ್ಟೂರಶೆಟ್ಟರ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net