ಮೂರು ತಾಲೂಕಿನಲ್ಲಿ ಭೂಸ್ವಾಧೀನ ‘ವರಿ’

dc office new
Published on

 ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ

ಬೆಂಗಳೂರು ಗ್ರಾಮಾಂತರ ಜಿಲ್ಲೆ ರಾಜ್ಯ ರಾಜಧಾನಿ ಬೆಂಗಳೂರಿನ ಗಡಿ ಹಂಚಿಕೊಂಡಿರುವುದು ವರವೋ ಅಥವಾ ಶಾಪವೋ ಎಂಬಂಥ ಚರ್ಚೆಗಳಿಗೆ ಭೂಸ್ವಾಧೀನ ಪ್ರಕ್ರಿಯೆ ದಾರಿಮಾಡಿಕೊಟ್ಟಿದೆ. ನೆಲಮಂಗಲದಲ್ಲಿ ಏರ್‌ಪೋರ್ಟ್, ಹೊಸಕೋಟೆಯಲ್ಲಿ ಟೌನ್‌ಶ್ಿ ಹಾಗೂ ದೇವನಹಳ್ಳಿಯಲ್ಲಿ ಕೈಗಾರಿಕಾ ವಲಯದ ಕಾರಣ ಆರಂಭವಾಗಿರುವ ಭೂಸ್ವಾಧೀನ ಪ್ರಕ್ರಿಯೆ ರೈತಾಪಿ ಜನರ ಆಕ್ರೋಶಕ್ಕೆ ಕಾರಣವಾಗಿದ್ದು, ಈ ಮೂರು ಕ್ಷೇತ್ರಗಳನ್ನು ಪ್ರತಿನಿಧಿಸುತ್ತಿರುವ ಕಾಂಗ್ರೆಸ್ ಶಾಸಕರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ತಮ್ಮದೇ ಸರ್ಕಾರದ ಆದೇಶವನ್ನು ಇತ್ತ ಪಾಲಿಸಲೂ ಆಗದೆ ಅತ್ತ ವಿರೋಧಿಸಲೂ ಆಗದೆ ರೈತರ ಕಣ್ಣೋರೆಸುವ ತಂತ್ರಕ್ಕಷ್ಟೇ ಸೀಮಿತವಾಗುವಂತ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ಅವಕಾಶ ಕೊಡಲ್ಲ ಅಂತಾರೆ! ಯಾವುದೇ ಕಾರಣಕ್ಕೂ ಕೃಷಿ ಭೂಮಿ ಸ್ವಾಧೀನಕ್ಕೆ ಅವಕಾಶ ನೀಡುವುದಿಲ್ಲ, ಗ್ರಾಮಸ್ಥರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುವುದಿಲ್ಲ ಎಂಬುದು ಮೂರು ತಾಲೂಕುಗಳ ಶಾಸಕರ ಸಿದ್ದ ಉತ್ತರವಾಗಿದೆ. ಆದರೆ ಮತ್ತೊಂದೆಡೆ ಸರ್ಕಾರದಿಂದ ನಡೆಯುವ ಪ್ರಾಥಮಿಕ ಪ್ರಕ್ರಿಯೆಗಳು ಸದ್ದಿಲ್ಲದೆ ಸಾಗಿರುವುದು ಸ್ಥಳೀಯ ಕೆಂಗಣ್ಣಿಗೆ ಶಾಸಕರು ಗುರಿಯಾಗುವಂತಾಗಿದೆ. ಯಾವುದೇ ಕಾರ್ಯಕ್ರಮಕ್ಕೆ ತೆರಳಿದರೂ ಸ್ಥಳೀಯರು ಭೂಸ್ವಾಧೀನ ಪ್ರಕ್ರಿಯೆ ಬಗ್ಗೆಯೇ ಆತಂಕ ವ್ಯಕ್ತಪಡಿಸುತ್ತಾರೆ ಆಗ ಶಾಸಕರು ಅದಕ್ಕೆ ಅವಕಾಶ ಕೊಡುವುದಿಲ್ಲ ನಾವಿದ್ದೇವೆ ಎಂಬ ಭರವಸೆ ನೀಡುತ್ತಲೇ ಬರುತ್ತಿದ್ದಾರೆ. ಇದು ದಿನೆ ದಿನೇ ಪುನಾವರ್ತನೆಯಾಗುತ್ತಿದ್ದು ಭೂಮಿ ಕಳೆದುಕೊಳ್ಳುವ ಆತಂಕದಲ್ಲಿರುವ ರೈತರಿಗೆ ಶಾಸಕರ ಭರವಸೆ ಮೇಲಿನ ನಂಬಿಕೆಯೂ ದಿನೆ ದಿನೇಕ್ಷೀಣಿಸುತ್ತಿದೆ. ಇದು ಮುಂದಿನ ದಿನಗಳಲ್ಲಿ ಯಾವ ರೂಪ ಪಡೆಯಲಿದೆ, ಮುಂದಿನ ಚುನಾವಣೆ ವೇಳೆ ಪ್ರತಿಪಕ್ಷಗಳು ಇದನ್ನೆ ಹೇಗೆ ಚುನಾವಣಾ ಅಸವನ್ನಾಗಿ ಬಳಸಿಕೊಳ್ಳಲಿವೆ ಎಂಬ ಕುತೂಹಲಕ್ಕೆ ಎಡೆಮಾಡಿಕೊಟ್ಟಿವೆ.

ನೆಲಮಂಗಲದಲ್ಲಿ ಏರ್‌ಪೋರ್ಟ್ ಜಾಗ ಪರಿಶೀಲನೆ: ಬೆಂಗಳೂರಿನ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭದ ಸುದ್ದಿ ಹೆಚ್ಚು ಸದ್ದು ಮಾಡುತ್ತಿದ್ದು, ನೆಲಮಂಗಲ ತಾಲೂಕಿನಲ್ಲಿ ಏರ್‌ಪೋರ್ಟ್ ನಿರ್ಮಾಣಕ್ಕೆ ಸರ್ಕಾರ ಒಲವು ತೋರಿಸುತ್ತಿದೆ ಎಂಬ ಮಾತು ಹೆಚ್ಚು ಪ್ರಚಲಿತವಾಗಿದೆ. ಈಗಾಗಲೇ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ತಾಂತ್ರಿಕ ತಂಡ ನೆಲಮಂಗಲ ತಾಲೂಕಿನಲ್ಲಿ ಸ್ಥಳ ಪರಿಶೀಲನೆ ನಡೆಸಿದೆ ಎನ್ನಲಾಗಿದ್ದು ಹಲವು ಗ್ರಾಮಗಳು ನಾಮವಶೇಷವಾಗಲಿವೆ ಎಂಬ ಆತಂಕ ಎದುರಾಗಿದೆ. ಈ ಬಗ್ಗೆ ಈಗಾಗಲೇ ಆಯಾ ವ್ಯಾಪ್ತಿಯ ರೈತರು ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದು, ಸ್ಥಳೀಯ ಶಾಸಕರಿಗೆ ಮಗ್ಗಲ ಮುಳ್ಳು ಚುಚ್ಚಿದಂತಾಗುತ್ತಿದೆ. ಇದುವರೆಗೆ ನೆಲಮಂಗಲ ಶಾಸಕ ಎಲ್.ಶ್ರೀನಿವಾಸ್ ಇದಕ್ಕೆ ಅವಕಾಶ ಕೊಡುವುದಿಲ್ಲ ಕ್ಷೇತ್ರದ ಕೃಷಿ ಭೂಮಿಯ ಒಂದಿಂಚು ಸ್ವಾಧೀನಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳುತ್ತಲೇ ಇದ್ದಾರೆ. ಆದರೂ ತಣ್ಣನೆ ಆರಂಭವಾಗಿರುವ ರೈತರ ಅಸಮಾಧಾನದ ಹೊಗೆ ಶಾಸಕರ ನೆತ್ತಿ ಸುಡುವಂತಾಗಿದೆ.

ಉಸ್ತುವಾರಿ ವಿರುದ್ಧ ಕೆಂಡ: ಇನ್ನೂ ಉಸ್ತುವಾರಿ ಸಚಿವರೂ ಆಗಿರುವ ದೇವನಹಳ್ಳಿ ಶಾಸಕ ಕೆ.ಎಚ್.ಮುನಿಯಪ್ಪ ವಿರುದ್ಧ ಈಗಾಗಲೇ ಬಹಿರಂಗವಾಗಿಯೇ ರೈತ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅನೇಕ ಸಂಧಾನ ಸಭೆಗಳು ಕೇವಲ ಕಣ್ಣೊರೆಸುವ ತಂತ್ರ ಎಂಬುದಾಗಿ ಮನದಟ್ಟು ಮಾಡಿಕೊಂಡಿರುವ ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟಗಾರರು ಸಚಿವರ ನಡೆ ವಿರುದ್ಧ ಕೆಂಡಕಾರುತ್ತಿದ್ದಾರೆ. ಆಗಾಗ ಭುಗೆಲೇಳುವ ರೈತರ ಆಕ್ರೋಶ ಮುಂದಿನ ದಿನಗಳಲ್ಲಿ ಉಗ್ರ ರೂಪ ತಳೆಯುವ ಲಕ್ಷಣ ನಿಚ್ಛಳವಾಗಿದೆ. ರೈತರ ಪರ ಎಂದು ಹೇಳಿಕೊಂಡೆ ಸಚಿವರು ಬರುತ್ತಿದ್ದರೂ ಸದ್ದಿಲ್ಲದೆ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ ರೈತರಿಗೆ ನೋಟಿಸ್‌ಗಳು ಜಾರಿಯಾಗುತ್ತಲೇ ಇವೆ.

ಹೊಸಕೋಟೆ ಟೌನ್‌ಶೀಪ್ ಭೂತ: ಗ್ರೇಟರ್ ಬೆಂಗಳೂರು ನೆಪದಲ್ಲಿ ಹೊಸಕೋಟೆಯ ನಂದಗುಡಿ ಭಾಗದಲ್ಲಿ ಟೌನ್‌ಶ್ಿ ನಿರ್ಮಾಣಕ್ಕೆ ಸರ್ಕಾರದ ಮುಂದಾಗಿದೆ ಎಂಬ ಸುದ್ದಿ ಸುಮಾರು 36 ಗ್ರಾಮಗಳ ರೈತರನ್ನು ಕೆರಳಿಸಿದೆ.ಈಗಾಗಲೇ ಹಲವು ಬಾರಿ ಧರಣಿ, ಪ್ರತಿಭಟನೆಗಳು ನಡೆಸಿದ್ದು ಶಾಸಕರ ಮೇಲೆ ಒತ್ತಡ ಹಾಕಲಾಗುತ್ತಿದೆ. ಶಾಸಕರ ಶರತ್‌ಬಚ್ಚೇಗೌಡರಿಗೂ ಇದು ಹಗ್ಗಜಗ್ಗಾಟದಂತಾಗಿದ್ದು, ಸರ್ಕಾರದ ವಿರುದ್ಧ ಮಾತನಾಡಬೇಕೆ ರೈತರ ವಿರೋಧ ಕಟ್ಟಿಕೊಳ್ಳಬೇಕೆ ಎಂಬ ಗೊಂದಲ ಎದುರಿಸುವಂತಾಗಿದೆ. ಮುಂದಿನ ದಿನಗಳಲ್ಲಿ ಇದೇ ವಿಷಯ ರಾಜಕೀಯವಾಗಿ ಪೆಟ್ಟುಬಿದ್ದರೆ ಎಂಬ ಆತಂಕವೂ ಇದೆ.

ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಅವರ ನಡೆಯೇ ಅನುಮಾಸ್ಪದವಾಗಿದೆ, ಈ ಹಿಂದೆ ರೈತರ ಪರ ಇರುತ್ತೇನೆ ಎನ್ನುತ್ತಿದ್ದವರು ದೇವನಹಳ್ಳಿ ತಾಲೂಕಿನ ಹೋರಾಟಗಾರರ ಕಣ್ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಪೊಲೀಸರ ಮೂಲಕ ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರೆದರೆ ರೈತರು ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ.

ಕಾರಹಳ್ಳಿ ಶ್ರೀನಿವಾಸ್, ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಸಮಿತಿ ಮುಖಂಡ

ಶಾಸಕ ಶರತ್‌ಬಚ್ಚೇಗೌಡ ತಮ್ಮದೆ ಸರ್ಕಾರ ಅಧಿಕಾರದಲ್ಲಿದ್ದರೂ ನಂದಗುಡಿ ಟೌನ್‌ಶಿಪ್ ಕೈಬಿಡುವಂತೆ ಅಧಿವೇಶನದಲ್ಲೂ ಚರ್ಚೆ ಮಾಡಲಿಲ್ಲ. ಚುನಾವಣೆ ಸಂದರ್ಭದಲ್ಲಿ ಜನರ ಮತ ಬೇಕು ಆದರೆ ರೈತರ ಬೆಂಬಲಕ್ಕೆ ಬೆನ್ನುಹಾಕುತ್ತಿದ್ದಾರೆ.36 ಗ್ರಾಮಗಳ ಲವತ್ತಾದ ಭೂಮಿ ಉಳಿಸಿಕೊಡಬೇಕಾಗಿರುವುದು ಸ್ಥಳೀಯ ಶಾಸಕರ ಕರ್ತವ್ಯವಾಗಿದೆ.

ನಾಗರಾಜ್, ನಂದಗುಡಿ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಮುಖಂಡ

ಇದುವರೆಗೆ ಶಾಸಕ ಎಲ್.ಶ್ರೀನಿವಾಸ್ ಏರ್‌ಪೋರ್ಟ್ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಲೆ ಇದ್ದಾರೆ. ರೈತರ ಪರ ಬೆಂಬಲಕ್ಕೆ ನಿಂತಿದ್ದಾರೆ. ಆದರೂ ಅವರದೇ ಸರ್ಕಾರವಿರುವ ಕಾರಣ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಹೇಗೆ ಬದಲಾಗುತ್ತದೋ ಎಂಬ ಆತಂಕವೂ ಇದೆ. ಶಾಸಕರು ಕೊಟ್ಟ ಮಾತಿಗೆ ಬದ್ಧರಾಗಿರದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ನಿಶ್ಚಿತ.

ಸತೀಶ್‌ಕುಮಾರ್, ನೆಲಮಂಗಲ ರೈತ ಮುಖಂಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net