

ಅರ್ಹರಲ್ಲದವರು ಪಡೆದಿದ್ದ ಬಿಪಿಎಲ್ ಕಾರ್ಡ್ಗಳನ್ನು ದಂಡ ರಹಿತವಾಗಿ ಹಿಂದಿರುಗಿಸಲು ಏ.30 ಕೊನೆಯ ದಿವನಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಗೋಪಾಲಯ್ಯ ತಿಳಿಸಿದರು.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ನ ಎಚ್.ಡಿ.ರೇವಣ್ಣ ಪರವಾಗಿ ಎ.ಟಿ.ರಾಮಸ್ವಾಮಿ ಹಾಗೂ ಬಿಜೆಪಿಯ ಅರಗ ಜ್ಞಾನೇಂದ್ರ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಿಗದಿತ ದಿನಾಂಕದ ಒಳಗೆ ಸ್ವಯಂ ಪ್ರೇರಿತರಾಗಿ ಕಾರ್ಡ್ ಹಿಂತಿರುಗಿಸಿದರೆ ದಂಡ ವಸೂಲು ಮಾಡುವುದಿಲ್ಲ. ಶಿಕ್ಷೆಗೆ ಗುರಿಯಾಗುವುದು ಕೂಡ ತಪ್ಪುತ್ತದೆ. ಒಂದೊಮ್ಮೆ ಇಲಾಖೆ ಅಧಿಕಾರಿಗಳು ಮನೆಗೆ ಭೇಟಿ ನೀಡಿ ಅನರ್ಹರು ಪಡಿತರ ಚೀಟಿ ಪಡೆದುಕೊಂಡಿರುವುದನ್ನು ಪತ್ತೆ ಮಾಡಿದರೆ ದಂಡ ವಿಧಿಸುವುದು ಕಡ್ಡಾಯ ಎಂದರು.
ಇದುವರೆಗೂ 63 ಸಾವಿರ ಮಂದಿ ಬಿಪಿಎಲ್ ಕಾರ್ಡ್ ಹಿಂದಿರುಗಿಸಿದ್ದು, 96 ಲಕ್ಷ ರೂ. ದಂಡ ವಸೂಲು ಮಾಡಲಾಗಿದೆ. ಬಹುತೇಕರು ತಾವೇ ದಂಡ ಪಾವತಿಸಿರು ವುದರಿಂದ ಹಿಂದಿರುಗಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು. ಹಾಸನ ಜಿಲ್ಲೆಯಲ್ಲಿ ಇನ್ನು 20 ದಿನದಲ್ಲಿ ಅರ್ಹರಿಗೆ ಪಡಿತರಚೀಟಿ ನೀಡಲು ಸೂಚನೆ ನೀಡಲಾಗಿದೆ ಎಂದರು. ಬಿಜೆಪಿಯ ಪಿ.ರಾಜೀವ್ರ ಮತ್ತೊಂದು ಪ್ರಶ್ನೆಗೆ ಉತ್ತರಿಸಿ ಸಚಿವರು, ಬಡವರಿಗೆ ನೀಡುವ ಪಡಿತರ ತೂಕದಲ್ಲಿ ಮೋಸ ಮಾಡುವ ನ್ಯಾಯಬೆಲೆ ಅಂಗಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದರು.