ಏ.೧೬ ರಿಂದ ಮೇ ೭ರ ವರೆಗೆ ಬಾಳೆಯಡ ಕ್ರಿಕೆಟ್ ನಮ್ಮೆ

Z BALEYADA
Published on

ಮಡಿಕೇರಿ: ಕೊಡವ ಕ್ರಿಕೆಟ್ ಅಕಾಡೆಮಿ ಹಾಗೂ ಬಾಳೆಯಡ ಕುಟುಂಬಸ್ಥರ ಸಹಯೋಗದಲ್ಲಿ ೨೧ನೇ ವರ್ಷದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ "ಬಾಳೆಯಡ ಕ್ರಿಕೆಟ್ ನಮ್ಮೆ-೨೦೨೩" ಏ.೧೬ ರಿಂದ ಮೇ ೭ರ ವರೆಗೆ ನಡೆಯಲಿದೆ ಎಂದು ಕ್ರೀಡಾ ಸಮಿತಿ ಅಧ್ಯಕ್ಷ ಹಾಗೂ ಹಾಕಿ ಮಾಜಿ ಒಲಂಪಿಯನ್ ಲೆಪ್ಟಿನೆಂಟ್ ಕರ್ನಲ್ ಬಾಳೆಯಡ ಸುಬ್ರಮಣಿ ತಿಳಿಸಿದ್ದಾರೆ.


ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ೨೦ ವರ್ಷಗಳಿಂದ ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ಕೊಡವ ಕುಟುಂಬ ತಂಡಗಳ ನಡುವೆ ಪಂದ್ಯಾವಳಿಯನ್ನು ನಡೆಸಿಕೊಂಡು ಬರುಲಾಗುತ್ತಿದೆ ಎಂದರು.


ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ೨೨ ದಿನಗಳ ಕಾಲ ನಡೆಯಲಿರುವ ಪಂದ್ಯಾವಳಿಗಾಗಿ ಸುಮಾರು ೩೦ ಲಕ್ಷ ರೂ. ವೆಚ್ಚ ಮಾಡಲಾಗುತ್ತಿದೆ. ಎರಡು ಮೈದಾನಗಳಲ್ಲಿ ನಡೆಯುವ ಪಂದ್ಯಾವಳಿಯಲ್ಲಿ ೨೫೦ ಕುಟುಂಬಗಳು ಭಾಗವಹಿಸುವ ನಿರೀಕ್ಷೆ ಇದೆ. ಜನವರಿ ತಿಂಗಳಿನಲ್ಲಿ ಪಂದ್ಯಾವಳಿಯ ಲೋಗೋ ಬಿಡುಗಡೆಯಾಗಲಿದೆ. ಕೊಡಗಿನ ಪ್ರಮುಖ ಗ್ರಾಮಗಳಲ್ಲಿ ನೋಂದಾವಣಿ ಕೇಂದ್ರಗಳನ್ನು ತೆರೆಯಲಾಗಿದ್ದು, ಆಸಕ್ತರು ಮೈದಾನ ಶುಲ್ಕ ರೂ.೧೫೦೦ ಪಾವತಿಸಿ ಹೆಸರು ನೋಂದಾಯಿಸಿಕೊಳ್ಳುವಂತೆ ಮನವಿ ಮಾಡಿದರು.


ಪಂದ್ಯಾವಳಿಯ ಯಶಸ್ಸಿಗಾಗಿ ಒಂದು ಸಮಿತಿ ಮತ್ತು ಉಪಸಮಿತಿ ರಚಿಸಲಾಗಿದ್ದು, ವಿಜೇತ ತಂಡಗಳಿಗೆ ಆಕರ್ಷಕ ನಗದು ಹಾಗೂ ಟ್ರೋಫಿಯನ್ನು ನೀಡಲಾಗುವುದು. ಅಲ್ಲದೆ ವೈಯುಕ್ತಿಕ ಪ್ರೋತ್ಸಾಹಕ ಬಹುಮಾನಗಳನ್ನು ಕೂಡ ನೀಡಲಾಗುವುದು ಎಂದು ತಿಳಿಸಿದರು.


ಕ್ರಿಕೆಟ್ ಹಬ್ಬ ಮುಗಿದ ನಂತರ ಯುವಕರಿಗೆ ಬೇಸಿಗೆ ತರಬೇತಿ ಶಿಬಿರವನ್ನು ಆಯೋಜಿಸಲಾಗುವುದು. ಓಪನ್ ಕ್ರಿಕೆಟ್ ಟೂರ್ನಮೆಂಟ್ ನಡೆಸುವ ಬಗ್ಗೆಯೂ ಚಿಂತನೆ ಇದೆ. ಕೊಡಗಿನ ಬಹುತೇಕ ಯುವಕರು ಕ್ರಿಕೆಟ್ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿದ್ದು, ಇವರನ್ನು ಪ್ರತಿಯೊಬ್ಬರು ಪ್ರೋತ್ಸಾಹಿಸಿ ರಾಜ್ಯ ಮತ್ತು ರಾಷ್ಟ್ರಮಟ್ಟಕ್ಕೆ ತಲುಪಿಸುವ ಪ್ರಯತ್ನ ಮಾಡಬೇಕೆಂದು ತಿಳಿಸಿದರು.


ಸುದ್ದಿಗೋಷ್ಠಿಯಲ್ಲಿ ಬಾಳೆಯಡ ಕ್ರಿಕೆಟ್ ನಮ್ಮೆ ಕ್ರೀಡಾ ಸಮಿತಿ ಕಾರ್ಯದರ್ಶಿ ಸದಾ ಕುಶಾಲಪ್ಪ, ಸಲಹೆಗಾರ ಕರುಣ್ ಕಾಳಪ್ಪ, ಪ್ರಮುಖರಾದ ಅಂಜು ಸುಬ್ರಮಣಿ, ದಿವ್ಯ ಮಂದಪ್ಪ ಹಾಗೂ ಪಂದ್ಯಾವಳಿಯ ನಿರ್ದೇಶಕ ಪ್ರತೀಶ್ ಪೂವಯ್ಯ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net