

ಸದೇಶ್ ಕಾರ್ಮಾಡ್ ಮೈಸೂರು
ನಾಡಹಬ್ಬ ದಸರಾ ಉತ್ಸವದ ಪ್ರಮುಖ ಆಕರ್ಷಣೆಯಲ್ಲಿ ಒಂದಾಗಿರುವ ಫಲಪುಷ್ಪ ಪ್ರದರ್ಶನ ಆಯೋಜನೆಗೆ ತೋಟಗಾರಿಕಾ ಇಲಾಖೆ ಸಿದ್ಧತೆ ಪ್ರಾರಂಭಿಸಿದ್ದು, ಈ ಬಾರಿ 28ಕ್ಕೂ ಹೆಚ್ಚು ಬಗೆಯ ಹೂವಿನ ಗಿಡಗಳನ್ನು 40 ಸಾವಿರ ಪಾಟ್‌ಗಳಲ್ಲಿ ಬೆಳೆಸಲಾಗುತ್ತಿದೆ. ಇಷ್ಟು ಮಾತ್ರವಲ್ಲದೆ ಫಲಪುಷ್ಪ ಪ್ರದರ್ಶನದ ಸೊಬಗು ಹೆಚ್ಚಿಸಲು ಊಟಿ, ಕಲ್ಕತ್ತಾ, ಪುಣೆ ಸೇರಿದಂತೆ ವಿವಿಧೆಡೆಯಿಂದ ಅಲಂಕಾರಿಕ ಗಿಡಗಳನ್ನು ತರಿಸಲಾಗುತ್ತದೆ.
ಈ ಬಾರಿ ನಾಡಹಬ್ಬ ದಸರಾ ಉತ್ಸವ ಸೆ.26ರಿಂದ ಅ.5ರವರೆಗೆ ನಡೆಯಲಿದ್ದು, ಫಲಪುಷ್ಪ ಪ್ರದರ್ಶನವನ್ನು 12 ರಿಂದ 14 ದಿನಗಳ ವರೆಗೆ ನಡೆಸಲು ಆಲೋಚನೆ ಸರ್ಕಾರದ ಮುಂದಿದೆ. ಕಳೆದ ಎರಡು ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಫಲಪುಷ್ಪ ಪ್ರದರ್ಶನ ಆಯೋಜನೆ ರದ್ದು ಪಡಿಸಲಾಗಿತ್ತು. ಹಾಗಾಗಿ ಈ ಬಾರಿ ಹೆಚ್ಚು ಜನರನ್ನು ಆಕರ್ಷಿಸುವ ರೀತಿಯಲ್ಲಿ ಫಲಪುಷ್ಪ ಪ್ರದರ್ಶನ ಆಯೋಜಿಸುವ ತಯಾರಿ ನಡೆಯುತ್ತಿದೆ. ಪ್ರತಿ ವರ್ಷ ಫಲಪುಷ್ಪ ಪ್ರದರ್ಶನಕ್ಕೆ ಪ್ರತಿದಿನ 40 ಸಾವಿರಕ್ಕೂ ಹೆಚ್ಚು ಮಂದಿ ಭೇಟಿ ನೀಡುತ್ತಾರೆ. ವಾರಾಂತ್ಯ ಹಾಗೂ ಆಯುಧ ಪೂಜೆ, ಜಂಬೂಸವಾರಿ ದಿನ 80 ರಿಂದ 90 ಸಾವಿರ ಜನರು ಭೇಟಿ ನೀಡುತ್ತಾರೆ. ಈ ಬಾರಿಯೂ ಮತ್ತಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವ ನಿರೀಕ್ಷೆ ಇದೆ.
ಕುಪ್ಪಣ್ಣ ಪಾರ್ಕ್‌ನ ಆಯ್ದ ಸ್ಥಳಗಳಲ್ಲಿ, ವಾಕಿಂಗ್ ಪಾಥ್‌ನಲ್ಲಿ ಜೋಡಿಸುವ ಸಲುವಾಗಿ ವಿವಿಧ ಮಾದರಿಯ ಹೂವಿನ ಕುಂಡಗಳಲ್ಲಿ ಹೂವಿನ ಗಿಡಗಳನ್ನು ಬೆಳೆಸಲಾಗುತ್ತಿದೆ. ದಸರಾ ಉತ್ಸವ ಆರಂಭಕ್ಕೂ ಒಂದು ವಾರದ ಮುನ್ನ ಹೂವುಗಳು ಅರಳುವ ರೀತಿಯಲ್ಲಿ ಸಮಯ ಹೊಂದಾಣಿಕೆ ಮಾಡಿಕೊಂಡು ಗಿಡಗಳನ್ನು ಬೆಳೆಸಲಾಗಿದೆ. 150 ದಿನದ ನಂತರ ಹೂವು ಬಿಡುವ ಗಿಡಗಳನ್ನು ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿಯೇ ಬೀಜ ನೆಟ್ಟು ಬೆಳೆಸಲಾಗುತ್ತಿದೆ. ಅದೇ ರೀತಿ 90 ದಿನ, 80 ದಿನ, 60 ದಿನ, 50 ದಿನ ಹಾಗೂ 30 ದಿನದ ಬಳಿಕ ಹೂವು ಬಿಡುವ ಗಿಡಗಳನ್ನು ಹಂತ ಹಂತವಾಗಿ ಬೆಳೆಸಲಾಗುತ್ತಿದ್ದು, ಫಲಪುಷ್ಪ ಪ್ರದರ್ಶನ ಆರಂಭ ಆರಂಭದ ವೇಳೆಯಲ್ಲಿ ಈ ಎಲ್ಲ ಹೂಗಳು ತಮ್ಮ ಚೆಲುವನ್ನು ಸೂಸಲಿವೆ. ಹೂ ಗಿಡಗಳನ್ನು ಕೇಂದ್ರ ಸಸ್ಯಗಾರ, ಕುಪ್ಪಣ್ಣ ಉದ್ಯಾನ, ಸರ್ಕಾರಿ ಅತಿಥಿ ಗೃಹ, ಜಲದರ್ಶನಿ ವಿಭಾಗ, ಕರ್ಜನ್ ಉದ್ಯಾನ, ಗೋರ್ಡಾನ್ ಉದ್ಯಾನ ಮತ್ತು ವಸ್ತು ಪ್ರದರ್ಶನದಲ್ಲಿರುವ ತೋಟಗಾರಿಕೆ ವಿಭಾಗಗಳಲ್ಲಿ ಬೆಳೆಯಲಾಗುತ್ತಿದೆ.
ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ ಫ್ರೆಂಚ್ ಮೇರಿ ಗೋಲ್ಡ್, ಡಯಾಂತರ್ಸ್, ವರ್ಬನ, ಬಿಗೋನಿಯಾ, ದಾಲಿಯಾ, ಫೈರ್ ಬುಸ್, ಆರ್ನಮೆಂಟಲ್ ಕೇಲಾ, ಜೀನಿಯಾ, ವಿಂಕಾ, ಸಾಲ್ವಿಯಾ, ಮಾರಿಗೋಲ್ಡ್, ಸ್ವೀಟ್ ವಿಲಿಯಮ್, ಸೆಲೋಶಿಯಾ ಸೇರಿದಂತೆ 28ಕ್ಕೂ ಹೆಚ್ಚು ತಳಿಯ ಗಿಡಗಳನ್ನು ಬೆಳೆಸಲಾಗಿದೆ. ಇದರೊಂದಿಗೆ ವಿವಿಧ ಅಲಂಕಾರಿಕಾ ಗಿಡಗಳನ್ನು 5 ಸಾವಿರ ಪಾಟ್‌ಗಳಲ್ಲಿ ಬೆಳೆಸಲಾಗುತ್ತಿದೆ.
ಟೆಂಡರ್ ಕರೆದ ತೋಟಗಾರಿಕಾ ಇಲಾಖೆ
ಫಲಪುಷ್ಪ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಸೆ.3 ರಂದು ಟೆಂಡರ್ ಕೊನೆಗೊಳ್ಳಲಿದ್ದು, ಸೆ.6 ರಂದು ಟೆಂಡರ್ ಓಪನ್ ಮಾಡಲಾಗುವುದು. ಟೆಂಡರ್‌ನಲ್ಲಿ ಪಾಲ್ಗೊಳ್ಳುವ ಸಂಸ್ಥೆಗಳು ಹಾಗೂ ಸಂಸ್ಥೆ ಉಲ್ಲೇಖಿಸುವ ಮೊತ್ತದ ಆಧಾರದ ಮೇಲೆ ಫಲಪುಷ್ಪ ಪ್ರದರ್ಶನವನ್ನು ಮತ್ತಷ್ಟು ಆಕರ್ಷಣೀ ಯಗೊಳಿಸಲು ತೋಟಗಾರಿಕಾ ಇಲಾಖೆ ನಿರ್ಧರಿಸಿದೆ. ಫಲಪುಷ್ಪ ಪ್ರದರ್ಶನದ ಟೆಂಡರ್ ಪಡೆಯಲು ವಿವಿಧೆಡೆ ಅಮ್ಯೂಸ್‌ಮೆಂಟ್ ಪಾರ್ಕ್ ನಡೆಸಿರುವ ಅನುಭವ ಹೊಂದಿರುವ ಕೆಲ ಸಂಸ್ಥೆಗಳು ಟೆಂಡರ್‌ನಲ್ಲಿ ಪಾಲ್ಗೊಳ್ಳಲು ಉತ್ಸಾಹ ತೋರಿವೆ.
ಪುನೀತ್ ರಾಜ್‌ಕುಮಾರ್? ಹರ್ ಘರ್ ತಿರಂಗಾ?
ಕುಪ್ಪಣ್ಣ ಉದ್ಯಾನದ ಗಾಜಿನ ಮನೆಯಲ್ಲಿ ಪ್ರತಿ ಬಾರಿ ಒಂದು ಬೃಹತ್ ಹೂವಿನ ಕಲಾಕೃತಿಯನ್ನು ನಿರ್ಮಾಣ ಮಾಡಲಾಗುತ್ತದೆ. ಆ ಕಲಾಕೃತಿಯು ಫಲಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಲಿದೆ. ಈ ಬಾರಿ ನಟ ದಿ. ಪುನೀತ್ ರಾಜ್ ಕುಮಾರ್ ಅವರ ಕಲಾಕೃತಿಯನ್ನು ಹೂವಿನಿಂದ ನಿರ್ಮಿಸಬೇಕು ಎಂಬ ಚರ್ಚೆ ನಡೆಯುತ್ತಿದೆ. ಅದೇ ರೀತಿ ದೆಹಲಿಯ ಕೆಂಪುಕೋಟೆ, ಹರ್ ಘರ್ ತಿರಂಗಾ ಸೇರಿದಂತೆ ವಿವಿಧ ಕಲಾಕೃತಿಗಳನ್ನು ನಿರ್ಮಿಸಬೇಕು ಎಂಬ ಕುರಿತು ಚರ್ಚೆ ನಡೆಯುತ್ತಿದೆ. ಅಂತಿಮವಾಗಿ ಯಾವ ಕಲಾಕೃತಿಯನ್ನು ನಿರ್ಮಾಣ ಮಾಡಬೇಕು ಎಂಬುದು ಸೆಪ್ಟೆಂಬರ್ 6ರ ನಂತರ ತೀರ್ಮಾನವಾಗುತ್ತದೆ.
ಈ ಬಾರಿ ದಸರಾ ಫಲಪುಷ್ಪ ಪ್ರದರ್ಶನವನ್ನು ಆಕರ್ಷಕವಾಗಿ ಆಯೋಜಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ. ಇದಕೋಸ್ಕರ 40 ಸಾವಿರ ಹೂ ಕುಂಡದಲ್ಲಿ ಹೂ ಗಿಡಗಳನ್ನು ಬೆಳೆಸಲಾಗುತ್ತಿದೆ. ಫಲಪುಷ್ಪ ಪ್ರದರ್ಶನ ಆಯೋಜನೆಗೆ ಸಂಬಂಧಿಸಿದಂತೆ ಟೆಂಡರ್ ಕರೆಯಲಾಗಿದ್ದು, ಟೆಂಡರ್ ಓಪನ್ ಆದ ನಂತರ ಫಲಪುಷ್ಪ ಪ್ರದರ್ಶನದ ಸ್ಪಷ್ಟ ಚಿತ್ರಣ ದೊರೆಯಲಿದೆ.
ರುದ್ರೇಶ್, ಉಪ ನಿರ್ದೇಶಕ, ತೋಟಗಾರಿಕಾ ಇಲಾಖೆ