ಜಿಲ್ಲೆಯ ಹಲವೆಡೆ ಪುನೀತ್‌ ಸ್ಮರಣೆ

DSC_083000000
Published on

ಚಿತ್ರದುರ್ಗ: ನಟ ದಿ. ಡಾ.ಪುನೀತ್‌ ರಾಜ್‌ಕುಮಾರ್‌ ಅವರ ಮೊದಲ ವರ್ಷದ ಪುಣ್ಯ ಸ್ಮರಣೆಯನ್ನು ಕೋಟೆನಗರಿ ಸೇರಿ ಜಿಲ್ಲೆಯ ಹಲವೆಡೆ ಅಭಿಮಾನಿಗಳು ಶನಿವಾರ ಆಚರಿಸುವ ಮೂಲಕ ಸ್ಮರಿಸಿಕೊಂಡರು. ಕೆಲವೆಡೆ ಶೋಕ ಗೀತೆಗಳು ನೆರೆದಿದ್ದವರಲ್ಲಿ ಬೇಸರವನ್ನುಂಟು ಮಾಡಿತು.

ಬೆಳ್ಳಿ ವರ್ಣದ ಸಾರೋಟಿನಲ್ಲಿ ಪುನೀತ್‌ ಅವರ ಭಾವಚಿತ್ರವಿಟ್ಟು ಪುಷ್ಪಾಲಂಕಾರ ಮಾಡಲಾಯಿತು. ಜಿಲ್ಲಾಧಿಕಾರಿ ಜಿ.ಆರ್‌.ಜೆ. ದಿವ್ಯಾಪ್ರಭು ಅವರು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ನಂತರ ಮದಕರಿನಾಯಕ ವೃತ್ತದ ಮುಂಭಾಗದಿಂದ ಆರಂಭವಾದ ಮೆರವಣಿಗೆಗೆ ಬ್ಯಾಂಡ್‌ ಸೆಟ್‌ ಬಾರಿಸುವ, ನಾಡ ಧ್ವಜ ಕೈಯಲ್ಲಿಡಿಯುವ ಮೂಲಕ ಚಾಲನೆ ನೀಡಿದರು.

ಜೋಗಿಮಟ್ಟಿ ರಸ್ತೆ, ದೊಡ್ಡಪೇಟೆ, ಚಿಕ್ಕಪೇಟೆ, ಬುರುಜನಹಟ್ಟಿ, ಸಂಗೊಳ್ಳಿರಾಯಣ್ಣ, ಮಹಾತ್ಮಗಾಂಧಿ ಹಾಗೂ ಎಸ್‌ಬಿಐ ವೃತ್ತ ಸೇರಿ ನಗರದ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿತು. ಈ ವೇಳೆ ಬಹುತೇಕ ಶೋಕ ಗೀತೆಗಳನ್ನೇ ಶಾರದಾ ಬ್ರ್ಯಾಸ್‌ ಬ್ಯಾಂಡ್‌ ಕಲಾತಂಡದವರು ಪ್ರಸ್ತುತ ಪಡಿಸಿದರು. ಅಪ್ಪು ಅಭಿಮಾನಿಗಳ ಬಳಗ, ದೊಡ್ಡಪೇಟೆ ಗೆಳೆಯರ ಬಳಗ ಸೇರಿ ನೂರಾರು ಮಂದಿ ಪಾಲ್ಗೊಂಡು ಅಭಿಮಾನ ಮೆರೆದರು.

ಬಸವೇಶ್ವರ ಚಿತ್ರಮಂದಿರದಲ್ಲಿ ಗಂಧದಗುಡಿ ಸಾಕ್ಷ್ಯಚಿತ್ರ ವೀಕ್ಷಿಸಿದ 500 ಮಂದಿ ಅಭಿಮಾನಿಗಳಿಗೆ ಅಪ್ಪು ಯೂತ್‌ ಬ್ರಿಗೇಡ್‌, ಯುವರಾಜ್‌ಕುಮಾರ್‌ ಸೇನೆ ಪದಾಧಿಕಾರಿಗಳು ಸಿಲ್ವರ್‌ ಸಸಿ ನೀಡುವ ಮೂಲಕ ಅಪ್ಪುವನ್ನು ನೆನಪು ಮಾಡಿಕೊಂಡರು. ಅಪ್ಪು ಕ್ಲಬ್‌ ತಂಡ ಹಲವು ಚಿತ್ರಗೀತೆಗಳನ್ನು ಹಾಡಿ ಗಮನಸೆಳೆದರು. ವೀರವನಿತೆ ಒನಕೆ ಓಬವ್ವ ವೃತ್ತದ ಮುಂಭಾಗ ಡಿಸಿ ಸರ್ಕಲ್‌ ಬಾಯ್ಸ್‌ ಪದಾಧಿಕಾರಿಗಳು ಅನ್ನಸಂತರ್ಪಣೆ ಆಯೋಜಿಸಿದ್ದರು. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಎಪಿಎಂಸಿ ಕೆಲಸಗಾರರು ಕೂಡ ಅಪ್ಪು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಹಲವೆಡೆ ನುಡಿನಮನ ಕಾರ್ಯಕ್ರಮ ಜರುಗಿತು.

ನಗರದ ಹಳೆ ಮಾಧ್ಯಮಿಕ ಶಾಲಾ ಮೈದಾನದಲ್ಲಿ ಶನಿವಾರದಿಂದ ನಾಲ್ಕು ದಿನ ಜೆ.ಜೆ.ಹಟ್ಟಿ ಪವರ್‌ಸ್ಟಾರ್‌ ಗೆಳೆಯರ ಬಳಗದಿಂದ ಆಯೋಜಿಸಿರುವ ಪವರ್‌ಸ್ಟಾರ್‌ ಕಪ್‌ - 2022 ಲೀಗ್‌-ಕಮ್‌ ನಾಕೌಟ್‌ ಟೆನ್ನಿಸ್‌ ಬಾಲ್‌ ಕ್ರಿಕೆಟ್‌ ಟೂರ್ನಿಮೆಂಟ್‌ಗೆ ವಿಧಾನಪರಿಷತ್‌ ಮಾಜಿ ಸದಸ್ಯ ಜಿ.ರಘು ಆಚಾರ್‌ ಅಪ್ಪು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ನಂತರ ಚಾಲನೆ ನೀಡಿದರು. ನಂತರ ಅಖಾಡಕ್ಕೆ ಇಳಿದ ತಂಡಗಳು ಪರಸ್ಪರ ಸೆಣಸಾಟದಲ್ಲಿ ನಿರತವಾದವು. ಇಡೀ ಮೈದಾನದ ಅಲ್ಲಲ್ಲಿ 40ಕ್ಕೂ ಹೆಚ್ಚು ಅಪ್ಪು ಕಟೌಟ್‌ಗಳು ರಾರಾಜಿಸಿದರು.

ಮೆರವಣಿಗೆಯಲ್ಲಿ ನಗರಸಭೆ ಮಾಜಿ ಅಧ್ಯಕ್ಷರಾದ ಸಿ.ಟಿ.ಕೃಷ್ಣಮೂರ್ತಿ, ನಿರಂಜನಮೂರ್ತಿ, ಮಾಜಿ ಸದಸ್ಯರಾದ ರಾಜೇಶ್‌, ಗಾಡಿ ಮಂಜುನಾಥ್‌, ಚಂದ್ರಶೇಖರ್‌, ಲೇಖಕ ಆನಂದ್‌, ಮಲ್ಲಿಕಾರ್ಜುನ್‌, ನಾಗರಾಜ್‌ ಸಂಗಂ, ದೊಡ್ಡಪೇಟೆ ಗೆಳೆಯರ ಬಳಗದ ಪದಾಧಿಕಾರಿಗಳಾದ ಮಂಜುನಾಥ್‌, ಕಾಟಲಿಂಗಸ್ವಾಮಿ, ಲಿಂಗರಾಜ್‌, ಡಿ.ವಿ.ಅನಿಲ್‌, ಪ್ರಸನ್ನಕುಮಾರ್‌, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net