

ಮೈಸೂರು: ದಸರಾ ವಸ್ತು ಪ್ರದರ್ಶನ ಸೆ.26 ರಿಂದ ಡಿ.24ರವರೆಗೆ ಹಮ್ಮಿಕೊಳ್ಳಲಾಗಿದ್ದು, ಈ ಬಾರಿ ನಟ ದಿ. ಪುನೀತ್ ರಾಜ್‌ಕುಮಾರ್ ನೆನಪಿನಲ್ಲಿ ನಿರ್ಮಾಣ ಮಾಡುವ ‘ಸ್ಯಾಂಡ್ ಮ್ಯೂಸಿಯಂ’ ಹಾಗೂ ‘ಯೋಗ ಥ್ರೀಡಿ ವಿಡಿಯೋ ಮ್ಯಾಪಿಂಗ್’ ಪ್ರದರ್ಶನ ಪ್ರಮುಖ ಆಕರ್ಷಣೆಯಾಗಿದೆ.
ಕೋವಿಡ್ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ದಸರಾ ವಸ್ತು ಪ್ರದರ್ಶನ ಆಯೋಜಿಸಲು ಸಾಧ್ಯವಾಗಿರಲಿಲ್ಲ. ಎರಡು ವರ್ಷಗಳ ನಂತರ ಆಯೋಜಿಸುತ್ತಿರುವ ವಸ್ತು ಪ್ರದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಆಕರ್ಷಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಮಿರ್ಲೆ ಶ್ರೀನಿವಾಸ್ ಗೌಡ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸ್ಯಾಂಡ್ ಮ್ಯೂಸಿಯಂನಲ್ಲಿ ಪುನೀತ್ ರಾಜ್‌ಕುಮಾರ್ ಕಲಾಕೃತಿಯ ಜತೆಗೆ ಸ್ವಾತಂತ್ರೃದ ಅಮೃತ ಮಹೋತ್ಸವಕ್ಕೆ ಸಂಬಂಧಿಸಿದ ಮರಳಿನ ಕಲಾಕೃತಿಗಳು, ಪ್ರಧಾನಿ ನರೇಂದ್ರ ಮೋದಿ ಮೈಸೂರು ಅರಮನೆ ಆವರಣದಲ್ಲಿ ಭಾಗವಹಿಸಿದ ಯೋಗದ ಕಲಾಕೃತಿ, ಸ್ವಾತಂತ್ರೃ ಹೋರಾಟಗಾರ ವಿ.ಡಿ. ಸಾವರ್ಕರ್ ಸೇರಿದಂತೆ ವಿವಿಧ ಗಣ್ಯರ ಕಲಾಕೃತಿಗಳನ್ನು ನಿರ್ಮಾಣ ಮಾಡಲಾಗುವುದು. ಮರಳು ಕಲಾವಿದೆ ಗೌರಿ ಅವರಿಗೆ ಕಲಾಕೃತಿಗಳನ್ನು ರಚಿಸುವ ಜವಾಬ್ದಾರಿ ನೀಡಲಾಗಿದೆ ಎಂದರು.
ಈ ಬಾರಿ ಲೇಜರ್ ಶೋ ಬದಲು ‘ಯೋಗ ಥ್ರೀಡಿ ವಿಡಿಯೋ ಮ್ಯಾಪಿಂಗ್’ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದ್ದು, ಇದು ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಆಕರ್ಷಿಸುವ ನಿರೀಕ್ಷೆಯನ್ನು ಹೊಂದಿದ್ದೇವೆ. ಇದು ಲೇಜರ್ ಶೋ ಗಿಂತ ಅತ್ಯುತ್ತಮವಾಗಿ ಮೂಡಿ ಬರಲಿದ್ದು, ಇದೇ ಪ್ರಥಮ ಬಾರಿಗೆ ಮೈಸೂರಿನಲ್ಲಿ ‘ಯೋಗ ಥ್ರೀಡಿ ವಿಡಿಯೋ ಮ್ಯಾಪಿಂಗ್’ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಾಂಪ್ರದಾಯಿಕ ಶೈಲಿಯ ಆಹಾರ ಮೇಳವನ್ನು ಆಯೋಜಿಸಲು ಸಿದ್ಧತೆ ಕೈಗೊಳ್ಳಲಾಗಿದೆ. ಇದರಲ್ಲಿ ಸಸ್ಯಾಹಾರ ಹಾಗೂ ಮಾಂಸಾಹಾರ ಮಳಿಗೆಗಳನ್ನು ಪ್ರತ್ಯೇಕವಾಗಿ ನಿರ್ಮಾಣ ಮಾಡಲಾಗುವುದು. ಆಹಾರ ಮೇಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭೇಟಿ ನೀಡುವ ನಿರೀಕ್ಷೆ ಇದೆ ಎಂದರು. ಸುದ್ದಿಗೋಷ್ಠಿಯಲ್ಲಿ ಪ್ರಾಧಿಕಾರದ ಪ್ರಭಾರ ಮುಖ್ಯಕಾರ್ಯನಿರ್ವಹಣಾಧಿಕಾರಿ ರುದ್ರೇಶ್ ಇದ್ದರು.