

ತುಮಕೂರು: ಸೂಪರ್‌ಸೀಡ್ (ಬರಖಾಸ್ತು) ಗುಮ್ಮಕ್ಕೆ ಹೆದರಿದ ಜಿಲ್ಲಾಪಂಚಾಯಿತಿ ಸದಸ್ಯರು ಬಹುದಿನದ ನಂತರ ಸಾಮಾನ್ಯಸಭೆ ನಡೆಸಲು ಕೊನೆಗೂ ಅವಕಾಶ ಮಾಡಿಕೊಟ್ಟರು. ಜಿಪಂ ಅಧ್ಯಕ್ಷೆ ಎಂ.ಲತಾ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಪುನರುಚ್ಚರಿಸುತ್ತಲೇ 500ಕೋಟಿ ರೂಪಾಯಿ ವಿವಿಧ ಕ್ರಿಯಾ ಯೋಜನೆಗಳಿಗೆ ಸರ್ವಾನುಮತದ ಅನುಮೋದನೆ ನೀಡಿದರು.
ಶುಕ್ರವಾರ ಜಿಪಂ ಸಭಾಂಗಣದಲ್ಲಿ ಜಿಪಂ ಅಧ್ಯಕ್ಷೆ ಎಂ.ಲತಾ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸರ್ವಸದಸ್ಯರ ಸಾಮಾನ್ಯಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಖುದ್ದು ಹಾಜರಾಗಿ ಕ್ರಿಯಾಯೋಜನೆಗಳಿಗೆ ಅನುಮೋದನೆ ನೀಡುವಂತೆ ಸದಸ್ಯರಲ್ಲಿ ಮನವಿ ಮಾಡಿದರು.
ಜಿಪಂ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಸಂಸದರಾದ ಜಿ.ಎಸ್.ಬಸವರಾಜು, ಎ.ನಾರಾಯಣಸ್ವಾಮಿ, ಶಾಸಕರಾದ ವೆಂಕಟರಮಣಪ್ಪ, ಬಿ.ಸಿ.ನಾಗೇಶ್, ಡಾ.ಎಚ್.ಡಿ.ರಂಗನಾಥ್, ಜಿ.ಬಿ.ಜ್ಯೋತಿಗಣೇಶ್, ಡಾ.ರಾಜೇಶ್‌ಗೌಡ, ಮಸಾಲೆಜಯರಾಮ್, ಎಂ.ವಿ.ವೀರಭದ್ರಯ್ಯ, ಕೆ.ಎ.ತಿಪ್ಪೇಸ್ವಾಮಿ ಭಾಗವಹಿಸಿದ್ದು ಗಮನಸೆಳೆಯಿತು.
ಸಭೆಯ ಆರಂಭದಲ್ಲಿಯೇ ಮಾತಿಗಿಳಿದ ಸದಸ್ಯ ರಾಮಕೃಷ್ಣ, ಕಳೆದ ನಾಲ್ಕುವರೆ ವರ್ಷದಲ್ಲಿ ಜಿಪಂ ಭ್ರಷ್ಟಾಚಾರದ ಕೂಪವಾಗಿದ್ದು ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ, ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿ ಜಿಲ್ಲಾ ಉಸ್ತುವಾರಿ ಸಚಿವರ ಮೇಲೆ ವಿಶ್ವಾಸವಿಟ್ಟುಕೊಂಡು ಕ್ರಿಯಾಯೋಜನೆಗಳಿಗೆ ಅನುಮೋದನೆ ನೀಡುತ್ತೇವೆ ಎಂದರು.
ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಸೇವೆ ಮಾಡುವುದಾಗಿ ಜನರ ಕಾಲುಕಟ್ಟಿ ಅಧಿಕಾರಕ್ಕೆ ಬಂದಿರುವ ನಾವು ರಾಜಕಾರಣಕ್ಕಿಂತ ಸೇವೆಗೆ ಆದ್ಯತೆ ನೀಡಬೇಕು, ಜಿಲ್ಲೆಯ ಅಭಿವೃದ್ಧಿ ಹಿಂದುಳಿದಿದೆ, ಕೂಡಲೇ ಎಲ್ಲರೂ ರಾಜಕೀಯ ಪಕ್ಕಕ್ಕಿಟ್ಟು ಅನುಮೋದನೆ ನೀಡಬೇಕು ಎಂದು ಸಲಹೆ ನೀಡಿದರು.
ಹಿರಿಯ ಸದಸ್ಯ ವೈ.ಎಚ್.ಹುಚ್ಚಯ್ಯ ಮಾತನಾಡಿ, ಕಳೆದ ಸಾಲಿನಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಬಯೋಮೆಟ್ರಿಕ್ ಹಾಗೂ ಸಿಸಿ ಕ್ಯಾಮರಾ ಅಳವಡಿಸಲು ಸಾಮಾನ್ಯಸಭೆಯ ಅನುಮತಿ ಇಲ್ಲ್ಲದೆಯೇ 1.80ಕೋಟಿ ರೂ. ಖರ್ಚು ಮಾಡಲಾಗಿದೆ, ಈ ಬಗ್ಗೆ ಲೋಕಾಯುಕ್ತ ತನಿಖೆಗೆ ಸಾಮಾನ್ಯಸಭೆಯಲ್ಲಿ ನಿರ್ಣಯ ತೆಗೆದುಕೊಂಡಿದ್ದರೂ ಕ್ರಮಕೈಗೊಂಡಿಲ್ಲ, ಆದ್ದರಿಂದ ಸಾಮಾನ್ಯಸಭೆ ನಡೆಯಲು ಸದಸ್ಯರು ವಿರೋಧಿಸಿದ್ದರು ಎಂದರು.
ಅಚ್ಚರಿಯ ರೀತಿಯಲ್ಲಿ ಕಾಂಗ್ರೆಸ್ ಸದಸ್ಯ ಕೆಂಚಮಾರಯ್ಯ ಅಧಿಕಾರಿಗಳನ್ನು ಸಮರ್ಥಿಸಿಕೊಂಡರು. ಎಲ್ಲರ ಮಾತು ಆಲಿಸಿದ ಸಚಿವ ಮಾಧುಸ್ವಾಮಿ, ಸ್ಟಾಂಡಿಂಗ್ ಕಮಿಟಿ ಉಪಸಂಹಾರದಲ್ಲಿ ಯಾರ ಮೇಲೆ ತನಿಖೆಯಾಗಬೇಕು ಎಂದು ಬರೆದಿದೆಯೊ ಅವರ ವಿರುದ್ಧ ಡಿಸೆಂಬರ್ ಅಂತ್ಯದೊಳಗೆ ತನಿಖೆ ನಡೆಯಬೇಕು ಎಂದು ಜಿಪಂ ಸಿಇಒ ಶುಭಾಕಲ್ಯಾಣ್‌ಗೆ ಸೂಚಿಸಿದರು.
ಹಿಂದಿನ ಡಿಎಚ್‌ಒ ಡಾ.ರಂಗಸ್ವಾಮಿ ಜಿಪಂ ಸಾಮಾನ್ಯಸಭೆಯಲ್ಲಿ ಸ್ಥಾಯಿಸಮಿತಿ ಹಾಗೂ ಸಾಮಾನ್ಯಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಸಮರ್ಥಿಸಿಕೊಂಡರು. ಲೋಕಾಯುಕ್ತ ತನಿಖೆ ನಡೆಸಬೇಕು ಎಂದು ಮಹಲಿಂಗಪ್ಪ, ಕಲ್ಲೇಶ್, ರಾಮಚಂದ್ರಯ್ಯ ಮತ್ತಿತರರ ಸದಸ್ಯರು ಒತ್ತಾಯಿಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್, ಜಿಪಂ ಸಿಇಒ ಶುಭಾಕಲ್ಯಾಣ್ ಇದ್ದರು.
ಯಾವ ಯೋಜನೆ ಅನುಮೋದನೆ: ಲಿಂಕ್ ಡಾಕ್ಯುಮೆಂಟ್ ಅನ್ವಯ 529.78 ಕೋಟಿ ರೂ. ವಾರ್ಷಿಕ ಕ್ರಿಯಾ ಯೋಜನೆಗೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು, ಲಿಂಕ್ ಡಾಕ್ಯುಮೆಂಟ್‌ನಡಿ ವಿವಿಧ ಇಲಾಖಾ ಕಾರ್ಯಕ್ರಮಗಳ 529 ಕೋಟಿ ರೂ. ವಾರ್ಷಿಕ ಕ್ರಿಯಾ ಯೋಜನೆಗೆ ಜಿಪಂ ಶಾಸನಬದ್ಧ ಅನುದಾನದಡಿ 6.93ಕೋಟಿ ರೂ. ಹಾಗೂ 15ನೇ ಹಣಕಾಸು ಯೋಜನೆಯಡಿ 8.97ಕೋಟಿ ರೂ. ಕ್ರಿಯಾ ಯೋಜನೆಗೆ ಅನುಮೋದನೆ ಸಿಕ್ಕಿತು.