ವಿದ್ಯುತ್ ಕೇಂದ್ರ ಮೇಲ್ದರ್ಜೆಗೆ ಅನುಮೋದನೆ

mane
Published on

ಹಾನಗಲ್ಲ: ತಾಲೂಕಿನಲ್ಲಿ ವಿದ್ಯುತ್ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವುದು, ಸಮರ್ಪಕ ವಿದ್ಯುತ್ ಪೂರೈಕೆ, ಗೃಹಜ್ಯೋತಿ ಯೋಜನೆ ಮತ್ತಿತರ ವಿಷಯಗಳ ಕುರಿತು ಹೆಸ್ಕಾಂ ಅಧಿಕಾರಿಗಳೊಂದಿಗೆ ಶಾಸಕ ಶ್ರೀನಿವಾಸ ಮಾನೆ ಶುಕ್ರವಾರ ಸಭೆ ನಡೆಸಿದರು.

ತಾಲೂಕಿನ ಬೊಮ್ಮನಹಳ್ಳಿ ಮತ್ತು ಬೆಳಗಾಲಪೇಟೆ 33 ಕೆವಿ ವಿದ್ಯುತ್ ಉಪ ಕೇಂದ್ರಗಳನ್ನು 110 ಕೆವಿ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸಲು ಅನುಮೋದನೆ ಸಿಕ್ಕಿದೆ. ಗೊಂದಿ 110 ಕೆವಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಟೆಂಡರ್ ಪ್ರಕ್ರಿಯೆ ಕೈಗೊಳ್ಳಬೇಕಿದೆ ಎಂದು ಹೆಸ್ಕಾಂ ಕಾರ್ಯ ನಿರ್ವಾಹಕ ಇಂಜಿನಿಯರ್ ಎಚ್.ಕೃಷ್ಣಪ್ಪ ಮಾಹಿತಿ ನೀಡಿದರು.

ತಾಲೂಕಿನ ಬಾಳಂಬೀಡ 110 ಕೆವಿ ವಿದ್ಯುತ್ ಕೇಂದ್ರದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಯಳ್ಳೂರು, ಕೂಸನೂರು ಹಾಗೂ ನರೇಗಲ್ 110 ಕೆವಿ ವಿದ್ಯುತ್ ಕೇಂದ್ರಗಳಿಗೆ ಅನುಮೋದನೆ ದೊರಕಿಲ್ಲ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಎಸ್.ಎಸ್.ಜಿಂಗಾಡೆ ತಿಳಿಸಿದರು.
ಅಕ್ರಮ-ಸಕ್ರಮ ಯೋಜನೆಯಡಿ ಕೃಷಿ ಪಂಪ್ ಸೆಟ್ ಟಿಸಿ ಅಳವಡಿಸುವುದು ಬಾಕಿ ಉಳಿದಿದೆ. ಇದರಿಂದ ಕೃಷಿ ಚಟುವಟಿಕೆಗಳಿಗೆ ಹಿನ್ನಡೆ ಉಂಟಾಗಿದ್ದು, ಕೂಡಲೇ ಕ್ರಮ ಕೈಗೊಳ್ಳುವಂತೆ ಶ್ರೀನಿವಾಸ ಮಾನೆ ಸೂಚಿಸಿದರು.

ಅಕ್ಕಿಆಲೂರು ಮತ್ತು ಹಾನಗಲ್ಲಿಗೆ ವಿದ್ಯುತ್ ಲೈನ್ ನಿರ್ಮಾಣ, ಹಾನಗಲ್ಲ 33 ಕೆವಿ ವಿದ್ಯುತ್ ಕೇಂದ್ರದಲ್ಲಿ ಹೆಚ್ಚುವರಿ ಟಿಸಿ ಅಳವಡಿಕೆ, ಹಾನಗಲ್ಲ ಉಪ ವಿಭಾಗದ ಉದ್ದೇಶಿತ 39 ಫೀಡರ್‌ಗಳಿಗೆ ಲಿಂಕ್ ಲೈನ್ ನಿರ್ಮಾಣ ಇನ್ನಿತರ ವಿಷಯಗಳ ಕುರಿತು ಶಾಸಕ ಮಾನೆ ಮಾಹಿತಿ ಪಡೆದು ನಿರ್ದೇಶನ ನೀಡಿದರು.

ಹೆಸ್ಕಾಂನ ಬೃಹತ್ ಕಾಮಗಾರಿ ವಿಭಾಗದ ಕಾರ್ಯ ನಿರ್ವಾಹಕ ಇಂಜಿನಿಯರ್ ನಂದಾ ಮರೂಡಿ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಿಮಲಾ ಭಕ್ತ ಉಪಸ್ಥಿತರಿದ್ದರು.

ಸಹಾಯಧನ ಬಿಡುಗಡೆ

ಅತಿವೃಷ್ಟಿಯಿಂದ ಬಿದ್ದ ಮನೆಗಳ ಸಂತ್ರಸ್ತ ಫಲಾನುಭವಿಗಳಿಗೆ ರಾಜೀವ್ ಗಾಂಧಿ ವಸತಿ ನಿಗಮದಿಂದ 2022-23 ನೇ ಸಾಲಿನಲ್ಲಿ 2 ಮತ್ತು 3ನೇ ಕಂತಿನ ಸಹಾಯಧನ ಬಿಡುಗಡೆಯಾಗಿದೆ. ಶೀಘ್ರದಲ್ಲಿ ಅವರ ಖಾತೆಗಳಿಗೆ ನೇರವಾಗಿ ಹಣ ವರ್ಗಾವಣೆಯಾಗಲಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net