

ಮಡಿಕೇರಿ: ಅರಣ್ಯ ಹಕ್ಕು ಕಾಯ್ದೆಯಡಿ ಈಗಾಗಲೇ ಅರ್ಜಿ ಸಲ್ಲಿಸಿ ಉಪ ವಿಭಾಗ ಮಟ್ಟದಲ್ಲಿ ಅನುಮೋದನೆಗೊಂಡಿರುವ ಸುಮಾರು ೭೯ ಅರ್ಜಿಗಳಿಗೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶರವರ ಅಧ್ಯಕ್ಷತೆಯಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಅರಣ್ಯ ಹಕ್ಕು ಸಮಿತಿ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಉಪ ವಿಭಾಗಾಧಿಕಾರಿ, ಅರಣ್ಯಾಧಿಕಾರಿಗಳು, ಐಟಿಡಿಪಿ ಇಲಾಖಾ ಅಧಿಕಾರಿಗಳು ಹಾಗೂ ಸಮಿತಿ ಸದಸ್ಯರಿಂದ ಮಾಹಿತಿ ಪಡೆದು ಅರ್ಜಿಗಳನ್ನು ಪರಿಶೀಲಿಸಿ ಒಟ್ಟು ೯೨ ವೈಯಕ್ತಿಕ ಅರ್ಜಿಗಳಿಗೆ ಜಿಲ್ಲಾಧಿಕಾರಿಗಳು ಅನುಮೋದನೆ ನೀಡಿದರು.
ಮಡಿಕೇರಿ ವನ್ಯಜೀವಿ ವಿಭಾಗದ(ಪುಷ್ಪಗಿರಿ ವನ್ಯಜೀವಿ ವಲಯ) ಗಾಳಿಬೀಡು ವ್ಯಾಪ್ತಿಯ ೨ ಕುಟುಂಬ, ಮಡಿಕೇರಿ ವಿಭಾಗದ ಗಾಳಿಬೀಡು ಪ್ರಾದೇಶಿಕ ಅರಣ್ಯ ವಲಯ ವ್ಯಾಪ್ತಿಯ ೮, ಮಡಿಕೇರಿ ವಿಭಾಗದ ಮಾಲ್ದಾರೆ ವ್ಯಾಪ್ತಿಯ ಆಸ್ತಾನ ವ್ಯಾಪ್ತಿಯ ೨, ನಾಗರಹೊಳೆ ವನ್ಯಜೀವಿ ವಿಭಾಗದ ನಿಟ್ಟೂರು ಗ್ರಾ.ಪಂ.ವ್ಯಾಪ್ತಿಯ ಕೊಲ್ಲಿ ಹಾಡಿ ೭, ಚೆನ್ನೆಯನಕೋಟೆ ಗ್ರಾ.ಪಂ. ವ್ಯಾಪ್ತಿಯ ದಿಡ್ಡಳ್ಳಿ ೨, ತಿತಿಮತಿ ಗ್ರಾ.ಪಂ.ವ್ಯಾಪ್ತಿಯ ಅಕ್ಕೆಮಾಳ ೧, ಜಂಗಲ್ ಹಾಡಿ ೧, ಕೆ.ಬಾಡಗ ಗ್ರಾ.ಪಂ.ವ್ಯಾಪ್ತಿಯ ಕೊಡಂಗೆ ೨೦, ನಾಲ್ಕೇರಿ ಗ್ರಾ.ಪಂ.ವ್ಯಾಪ್ತಿಯ ಬೊಮ್ಮಾಡು ೮, ಗೋಣಿಗದ್ದೆ ೬, ಈ ಆದಿವಾಸಿ ಕುಟುಂಬಗಳಿಗೆ ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕುಪತ್ರ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಮಡಿಕೇರಿ ವಿಭಾಗದ ಭಾಗಮಂಡಲ ಪ್ರಾದೇಶಿಕ ಅರಣ್ಯ ವಲಯದ ಬಿ.ಬಾಡಗ ವ್ಯಾಪ್ತಿಯ ೧, ಕರಿಂಬಳಪು ವ್ಯಾಪ್ತಿಯ ೨೧ ಕುಟುಂಬಗಳಿಗೆ ಇತರೆ ಪಾರಂಪರಿಕ ಅರಣ್ಯ ವಾಸಿಗಳ ಕಾಯ್ದೆಯಡಿ ಅರಣ್ಯ ಹಕ್ಕುಪತ್ರ ನೀಡಲು ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು.
ಸೋಮವಾರಪೇಟೆ ತಾಲ್ಲೂಕಿನ ಮುಳ್ಳುಸೋಗೆ ಗ್ರಾ.ಪಂ.ವ್ಯಾಪ್ತಿಯ ಗೋಂದಿಬಸವನಹಳ್ಳಿ ವ್ಯಾಪ್ತಿಯ ಪರಿಶಿಷ್ಟ ಪಂಗಡದ ೯. ಪೊನ್ನಂಪೇಟೆ ತಾಲ್ಲೂಕಿನ ನಾಗರಹೊಳೆ ವನ್ಯಜೀವಿ ವಿಭಾಗದ ತಿತಿಮತಿ ಬೊಂಬುಕಾಡು ೩, ದೇವರಪುರ ದೇವಮಚ್ಚಿ ೧, ಒಟ್ಟು ೧೩ ವೈಯಕ್ತಿಕ ಅರ್ಜಿಗಳಿಗೆ ಅರಣ್ಯ ಹಕ್ಕು ಕಾಯ್ದೆಯಡಿ ಅರಣ್ಯಹಕ್ಕು ಪತ್ರ ನೀಡಲು ಅರಣ್ಯ ಹಕ್ಕು ಸಮಿತಿ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಕೊಲ್ಲಿಹಾಡಿ, ಮಾಕುಟ್ಟ ಹಾಗೂ ನೋಕ್ಯ ಹಾಡಿಗಳಲ್ಲಿ ಸಮುದಾಯ ಅರಣ್ಯ ಹಕ್ಕುಪತ್ರ ನೀಡಲು ಜಿಲ್ಲಾಧಿಕಾರಿ ಅನುಮೋದನೆ ನೀಡಿದರು.
ತಿತಿಮತಿ ಗ್ರಾ.ಪಂ.ವ್ಯಾಪ್ತಿಯ ನೋಕ್ಯ ಹಾಡಿಯಲ್ಲಿ ಒಂದೂವರೆ ಎಕರೆ ಜಾಗವನ್ನು ೭೦ ವರ್ಷಗಳಿಂದ ಸ್ಮಶಾನ ಉದ್ದೇಶಕ್ಕಾಗಿ ಬಳಸುತ್ತಿದ್ದರು. ಈ ಜಾಗವನ್ನು ಸಮುದಾಯ ಹಕ್ಕು ಅಡಿಯಲ್ಲಿ ಮಂಜೂರು ಮಾಡುವಂತೆ ಅರ್ಜಿ ಸಲ್ಲಿಸಿದ್ದರು. ಅದರಂತೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಅರಣ್ಯ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದು ಒಪ್ಪಿಗೆ ನೀಡಿದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ್ ಮಾತನಾಡಿ, ಸಮುದಾಯ ಸಂಪನ್ಮೂಲ ಹಕ್ಕು ಸಂಬಂಧಿಸಿದಂತೆ ಈಗಾಗಲೇ ೪೫ ಅರ್ಜಿಗಳಲ್ಲಿ ೧೩ ಅರ್ಜಿಗಳಿಗೆ ಅರಣ್ಯ ಹಕ್ಕುಪತ್ರ ವಿತರಿಸಲಾಗಿದೆ. ೨ ಅರ್ಜಿಗಳಿಗೆ ಮರು ಸರ್ವೇ ನಡೆಸಲಾಗಿದೆ. ಉಳಿದಂತೆ ೩೦ ಅರ್ಜಿಗಳಿಗೆ ಅನುಮೋದನೆ ನೀಡುವ ಸಂಬಂಧ ಸರ್ವೇ ಪ್ರತಿ, ನಕಾಶೆ, ಸ್ಥಳ ಮಹಜರು, ಗ್ರಾ.ಪಂ.ನಡವಳಿ ಮತ್ತಿತರ ಹೆಚ್ಚಿನ ಮಾಹಿತಿ ಒದಗಿಸುವಂತೆ ತಿಳಿಸಿದರು.
’ಸಮಗ್ರ ಗಿರಿಜನ ಯೋಜನಾ ಸಮನ್ವಯಾಧಿಕಾರಿ ಹೊನ್ನೇಗೌಡ ಮಾತನಾಡಿ, ನಾಗರಹೊಳೆ ಆಶ್ರಮ ಶಾಲೆಯ ಕಟ್ಟಡ ೧೯೬೦ ರಲ್ಲಿ ನಿರ್ಮಿಸಲಾಗಿದ್ದು, ೧೭೫ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಮಂಜೂರಾತಿ ದೊರೆತಿದೆ. ಸದ್ಯ ೭೦ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಈ ಆಶ್ರಮ ಶಾಲೆಯು ಹಂಚಿನ ಕಟ್ಟಡದಿಂದ ಕೂಡಿದೆ. ಜತೆಗೆ ಕಟ್ಟಡ ಶೀತಲಗೊಂಡು ಶೈಕ್ಷಣಿಕ ಚಟುವಟಿಕೆಗೆ ಹಾಗೂ ವಾಸ್ತವ್ಯಕ್ಕೆ ತುಂಬಾ ತೊಂದರೆಯಾಗಿದೆ. ಆದ್ದರಿಂದ ಅರಣ್ಯ ಅಂಚಿನಲ್ಲಿ ಹೊಸ ಕಟ್ಟಡ ನಿರ್ಮಿಸಲು ಎರಡು ಎಕರೆ ಸೂಕ್ತ ಜಾಗ ಒದಗಿಸಬೇಕು. ಸದ್ಯ ಹಾಲಿ ಕಟ್ಟಡದಲ್ಲಿ ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ ಅವಕಾಶ ಮಾಡಬೇಕು ಎಂದು ಮನವಿ ಮಾಡಿದರು.
ಅರಣ್ಯ ಪ್ರದೇಶ ವ್ಯಾಪ್ತಿಯ ತಾಳತ್ತಮನೆ, ನಾಥಂಗಾಲ, ಚೆನ್ನಯನಕೋಟೆ, ದೊಡ್ಡರೇಷ್ಮೆಹಡ್ಲು, ಚಿಕ್ಕರೇಷ್ಮೆಹಡ್ಲು ಹಾಡಿಗಳಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಅವಕಾಶ ನೀಡಬೇಕು. ಆಯಿರಸುಳಿ, ಜಂಗಲ್ ಹಾಡಿ, ಕಾರೆಕಂಡಿ, ಬಾಳುಮನೆ, ಕೊಡಂಗೆ, ನಾಗರಹೊಳೆ, ಗೋಣಿಗದ್ದೆ, ಬೊಮ್ಮಾಡು, ಕನ್ನಡಕಾಡು, ಕಲ್ಲುಮೊಟ್ಟೆ, ಬಾಳೆಗುಂಡಿ ಹಾಡಿಗಳಲ್ಲಿ ಅಂಗನವಾಡಿ ಕೇಂದ್ರ ನಿರ್ಮಿಸಲು ಅವಕಾಶ ಮಾಡಬೇಕು ಎಂದು ಹೊನ್ನೇಗೌಡ ಮನವಿ ಮಾಡಿದರು.
ವನ್ಯಜೀವಿ ಅರಣ್ಯ ಪ್ರದೇಶಗಳಲ್ಲಿ ಪರಿಸರ ಸ್ನೇಹಿಯಾಗಿ ಅಂಗನವಾಡಿ ನಿರ್ಮಿಸುವುದಕ್ಕೆ ಅಭ್ಯಂತರ ಇಲ್ಲ. ಆದರೆ ಸಿಮೆಂಟ್ ಕಟ್ಟಡ ನಿರ್ಮಿಸಬಾರದು ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹೇಳಿದರು.
ಸಭೆಯಲ್ಲಿ ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ನೆಹರು, ಪಾಷಾ, ಗೋಪಾಲ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಶೇಖರ್, ಪೊನ್ನಂಪೇಟೆ ತಾಲೂಕು ಸಮಗ್ರ ಗಿರಿಜನ ಯೋಜನಾಧಿಕಾರಿ ಗುರುಶಾಂತಪ್ಪ, ಮಡಿಕೇರಿ ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಬಾಲಕೃಷ್ಣ ರೈ, ವ್ಯವಸ್ಥಾಪಕರಾದ ದೇವರಾಜು, ಕಂದಾಯ ಹಾಗೂ ತಾ.ಪಂ. ಅಧಿಕಾರಿಗಳು ಹಲವು ಮಾಹಿತಿ ನೀಡಿದರು.