

ಕೆ.ಎಂ.ದೊಡ್ಡಿ : ಸರ್ಕಾರಿ ಶಾಲೆಗಳ ಉಳಿವಿಗೆ ಪಾಲಕರು ಮತ್ತು ಶಿಕ್ಷಕರ ಪಾತ್ರ ಬಹಳ ಮುಖ್ಯ ಎಂದು ಶಾಸಕ ಕದಲೂರು ಉದಯ್ ತಿಳಿಸಿದರು.
ಸಮೀಪದ ಅಣ್ಣೂರು ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಬ್ಯಾಗ್ ಹಾಗೂ ಪಠ್ಯಪರಿಕರ ವಿತರಣೆ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಿಗೆ ಬರುವ ವಿದ್ಯಾರ್ಥಿಗಳು ಸಂಖ್ಯೆ ಕಡಿಮೆಯಾಗುತ್ತಿದ್ದು, ದಾಖಲಾತಿ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳು ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಬ್ಯಾಗ್ ಮತ್ತು ಪುಸ್ತಕ ಸೇರಿದಂತೆ ಪಠ್ಯ ಪರಿಕರಗಳನ್ನು ವಿತರಿಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತಿದ್ದೇವೆ ಎಂದರು.
ನಾಲ್ಕು ವರ್ಷಗಳ ಸಮಾಜ ಸೇವಾ ಕಾರ್ಯದಲ್ಲಿದ್ದಾಗ ತಾಲೂಕಿನಲ್ಲಿರುವ ಶಾಲೆಗಳನ್ನು ಗಮನಿಸಿ ಹಲವಾರು ಶಾಲೆಗಳ ಅಭಿವೃದ್ಧಿಗೆ ಕೈ ಜೋಡಿಸಿ ಶಾಲೆಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ನಾನು ಶಾಸಕನಾದ ನಂತರ ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ಉತ್ತೇಜನಕ್ಕಾಗಿ ಸರ್ಕಾರಿ ಶಾಲಾ ಶುಲ್ಕವನ್ನು ನಮ್ಮ ಟ್ರಸ್ಟ್ ಮೂಲಕ ಭರಿಸಲಾಗಿತ್ತು, ಅಲ್ಲದೆ ಕಳೆದ ಬಾರಿ ಹಲವಾರು ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುವ ಅಡುಗೆ ಸಿಬ್ಬಂದಿಗೆ ಉಚಿತವಾಗಿ ಸಮವಸ್ತ್ರ ವಿತರಣೆ ಮಾಡಲಾಗಿತ್ತು ಎಂದು ವಿವರಿಸಿದರು.
ಕಳೆದ ಬಾರಿ ಉದಯಯಾನ 2.0 ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಗ್ರಾಮೀಣ ಭಾಗದಲ್ಲಿ ವಿದ್ಯಾಭ್ಯಾಸ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‌ಟ್ಯಾಪ್‌ಗಳನ್ನು ವಿತರಣೆ ಮಾಡಿದ್ದೇನೆ. ಸರ್ಕಾರಿ ಶಾಲೆಗಳು ಉಳಿಯಬೇಕಾದರೆ ಸರ್ಕಾರದಿಂದ ದೊರಕುವ ಎಲ್ಲ ಸವಲತ್ತುಗಳು ಸಮರ್ಪಕವಾಗಿ ದೊರಕಬೇಕು. ಈ ನಿಟ್ಟಿನಲ್ಲಿ ತಾಲೂಕಿನ ಹಲವು ಕಡೆ ಹಳೆಯ ಶಾಲಾ ಕಟ್ಟಡಗಳನ್ನು ಕೆಡವಿ ಹೊಸ ಕಟ್ಟಡಗಳನ್ನು ನಿರ್ಮಾಣ ಮಾಡುವ ಕಾರ್ಯಕ್ಕೆ ಚಾಲನೆ ನೀಡಿದ್ದೇನೆ. ಶೀಘ್ರದಲ್ಲೇ ಕಟ್ಟಡ ಕಾಮಗಾರಿಗಳು ಪೂರ್ಣಗೊಂಡು ಶಾಲಾ ಮಕ್ಕಳ ಸೇವೆಗೆ ನೀಡಲಾಗುವುದು ಎಂದರು.
20 ವರ್ಷಗಳಿಂದ ತಾಲೂಕಿನ ಸರ್ಕಾರಿ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಶಿಕ್ಷಣ ಸಚಿವರನ್ನು ಕ್ಷೇತ್ರಕ್ಕೆ ಕರೆದುಕೊಂಡು ಬಂದು ಶಾಲೆಗಳ ವಸ್ತುಸ್ಥಿತಿಗತಿಗಳ ಬಗ್ಗೆ ಮನವರಿಕೆ ಮಾಡಿ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಕೇಳಿದ್ದೇನೆ. ಶಿಕ್ಷಣ ಸಚಿವರು ನಮ್ಮ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಮದ್ದೂರು ಕ್ಷೇತ್ರದ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲು ಸಮ್ಮತಿಸಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಧನಂಜಯ ಮಾತನಾಡಿ, ಸಮಾಜ ಸೇವಕಿ ಹಾಗೂ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್‌ನ ಟ್ರಸ್ಟಿ ವಿನುತಾ ಉದಯ್ ಅವರಿಗೆ ಸರ್ಕಾರಿ ಶಾಲೆಗಳು ಹಾಗೂ ಶಾಲಾ ಮಕ್ಕಳ ಬಗ್ಗೆ ಹೆಚ್ಚಿನ ಪ್ರೀತಿ ಇದೆ. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳ ಉಳಿವಿಗಾಗಿ ಪಣ ತೊಟ್ಟು ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಕೈ ಜೋಡಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಸಕ ಉದಯ್ ಹಾಗೂ ಅವರ ಪತ್ನಿ ವಿನುತಾ ಉದಯ್ ಮದ್ದೂರು ಕ್ಷೇತ್ರದಲ್ಲಿ ಸುಮಾರು 64 ಕೊಠಡಿಗಳನ್ನು ಪುನಶ್ಚೇತನ ಮಾಡಿದ್ದಾರೆ. ಅಲ್ಲದೆ ಗ್ರಾಮೀಣ ಭಾಗದ ಸರ್ಕಾರಿ ಶಾಲಾ ಮಕ್ಕಳಿಗೆ ತಾಂತ್ರಿಕ ಶಿಕ್ಷಣ ಕಲ್ಪಿಸುವ ದಿಸೆಯಿಂದ ಸ್ಮಾರ್ಟ್ ಕ್ಲಾಸ್ ಆರಂಭಿಸಲು ಕೈಜೋಡಿಸಿದ್ದಾರೆ. ಅವರಿಗೆ ಮದ್ದೂರು ಕ್ಷೇತ್ರ ಶಿಕ್ಷಣ ಇಲಾಖೆಯ ಪರವಾಗಿ ಅಭಿನಂದನೆ ತಿಳಿಸುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲಾ ಆವರಣದಲ್ಲಿ ಗಿಡ ನೆಟ್ಟು ಪರಿಸರ ಕಾಳಜಿ ಮೆರೆದರು. ಕದಲೂರು ಉದಯ್ ಚಾರಿಟಬಲ್ ಟ್ರಸ್ಟಿನ್ ಮಹಿಳಾ ವಿಭಾಗದ ಅಧ್ಯಕ್ಷೆ ವಿನುತಾ ಉದಯ್, ಟ್ರಸ್ಟಿ ಕದಲೂರು ರವಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್. ರಾಜೀವ್, ಮನ್ ಮುಲ್ ನಿರ್ದೇಶಕ ಹರೀಶ್‌ಬಾಬು, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದರ್ಶ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರವಿ, ಪ್ರೌಢಶಾಲಾ ವಿಭಾಗದ ಎಸ್‌ಡಿಎಂಸಿ ಅಧ್ಯಕ್ಷ ಪುಟ್ಟರಾಜು, ಪ್ರಾಥಮಿಕ ಶಾಲೆ ವಿಭಾಗದ ಅಧ್ಯಕ್ಷ ಬೋರೇಗೌಡ, ಕಾಲೇಜು ಅಭಿವೃದ್ಧಿಯ ಉಪಾಧ್ಯಕ್ಷ ರಾಘವೇಂದ್ರ, ಎಂಪಿಪಿಎಸ್ ಅಧ್ಯಕ್ಷ ಉಮೇಶ್, ಗ್ರಾ.ಪಂ ಸದಸ್ಯ ಚಂದ್ರಶೇಖರ್, ಪಿಣ್ಣ ಸತೀಶ್ ಮುಖಂಡರಾದ ಕರಡಕೆರೆ ಮನು, ಅಣ್ಣೂರು ಮನೋಹರ್, ಅಮೀನ್ ಶಿವಲಿಂಗಯ್ಯ, ಚಿದಂಬರ ಮೂರ್ತಿ, ರಾಮಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.