

ಮುಳಬಾಗಿಲು: ಕೇಂದ್ರ ಸರ್ಕಾರದಿಂದ 15ನೇ ಹಣಕಾಸು ಯೋಜನೆಯಡಿ ಮುಳಬಾಗಿಲು ನಗರಸಭೆಗೆ 2.71 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಇದಕ್ಕೆ ಕ್ರಿಯಾಯೋಜನೆ ತಯಾರಿಸಬೇಕಿದೆ ಎಂದು ಪೌರಾಯುಕ್ತ ವಿ.ಶ್ರೀಧರ್ ಹೇಳಿದರು.
ನಗರಸಭೆಯ ಕಾರ್ಯಾಲಯದಲ್ಲಿ ಗುರುವಾರ ಶಾಸಕ ಎಚ್.ನಾಗೇಶ್ ಉಪಸ್ಥಿತಿಯಲ್ಲಿ ನಗರಸಭಾಧ್ಯಕ್ಷ ರಿಯಾಜ್ ಅಹ್ಮದ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸಿ, ಅನುದಾನವನ್ನು 2 ಭಾಗಗಳಾಗಿ ವಿಂಗಡಿಸಲಾಗಿದೆ, ಶೇ.60 ನಿರ್ಬಂಧಿತ ಅನುದಾನವಾಗಿದ್ದು, ಕುಡಿಯುವ ನೀರಿಗೆ ಶೇ.30, ನತ್ಯಾಜ್ಯ ನಿರ್ವಹಣೆಗೆ ಶೇ.30 ಬಳಸಬೇಕಿದೆ. ಉಳಿದ ಶೇ.40ರಷ್ಟನ್ನು ಅಭಿವೃದ್ಧಿ ಕಾಮಗಾರಿಗೆ ಬಳಸಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ತಿಳಿಸಿ ಸಭೆಯಲ್ಲಿ ಒಪ್ಪಿಗೆ ಪಡೆದರು.
ಹಿಂದಿನ ಸಭೆಯ ನಡಾವಳಿ ಮಂಡಿಸಿ ಒಪ್ಪಿಗೆ ಪಡೆಯಲಾಯಿತು. ಜನನ-ಮರಣ ಅಂಕಿ-ಅಂಶ, 2022-23ನೇ ಸಾಲಿನ 15ನೇ ಹಣಕಾಸು ಯೋಜನೆ, ಕ್ರಿಯಾಯೋಜನೆಯ ಎಸ್‌ಎಫ್‌ಸಿ ಮುಕ್ತನಿಧಿ ಯೋಜನೆಗೆ ಕ್ರಿಯಾ ಯೋಜನೆ ತಯಾರಿಸಲು ಒಪ್ಪಿಗೆ ಪಡೆಯಲಾಯಿತು. ವಿವಿಧ ಕಾಮಗಾರಿಗಳಿಗೆ ಅನುಮೋದನೆ: ನಗರದ ವಿವಿಧ ವಾರ್ಡ್‌ಗಳ ಕುಡಿಯುವ ನೀರಿನ ಕೊಳವೆಬಾವಿ, ಪೈಪ್‌ಲೈನ್, ಮೋಟರ್ ಅಳವಡಿಕೆ, ವಿದ್ಯುತ್ ಸಂಪರ್ಕ ಕಾಮಗಾರಿ ಪೂರ್ಣಗೊಳಿಸಲು ಅನುಮೋದನೆ ಪಡೆಯಲಾಯಿತು.
ನಗರದ ಸೋಮೇಶ್ವರಪಾಳ್ಯದ ಎಂ.ಸಿ.ರಸ್ತೆಯಿಂದ ಶ್ರೀನಿವಾಸಪುರ ರಸ್ತೆ ವೃತ್ತದಲ್ಲಿ ದ್ವಿಪಥ ರಸ್ತೆ ನಿರ್ವಾಣ ವಾಡಿದ್ದು ಮಧ್ಯಭಾಗದಲ್ಲಿ ವಿದ್ಯುತ್ ದೀಪ ಅಳವಡಿಕೆ, ಕಚೇರಿಗೆ ಗುತ್ತಿಗೆ ಆಧಾರದಮೇಲೆ ಕಂಪ್ಯೂಟರ್ ಆಪರೇಟರ್ ನಿಯೋಜನೆ, ಡಿವಿಜಿ ಶಾಲೆಗೆ ಕೊಳವೆಬಾವಿ ಕೊರೆಸುವುದು, ನತ್ಯಾಜ್ಯ ವಸ್ತು ನಿರ್ವಹಣೆಗೆ ಜೆಸಿಬಿ ಖರೀದಿ, ಕಾರ್ಯಾಲಯದ ಹಿಂಭಾಗ ವಾಹನಗಳ ಶೆಡ್ ನಿರ್ವಾಣ, ನೀರಿನ ಸಮಸ್ಯೆ ಬಗೆಹರಿಸಲು ಸಿಆರ್‌ಎಫ್ ಅನುದಾನದ ಬ್ಯಾಂಕ್ ಖಾತೆ ಬಡ್ಡಿ ಹಣ 24 ಲಕ್ಷ ರೂ. ಬಳಸಿಕೊಳ್ಳಲು ವಿವಿಧ ವಿದ್ಯುತ್ ಗುತ್ತಿಗೆ ಬಾಬ್ತುಗಳನ್ನು ಪಾವತಿಸಲು ಅನುಮೋದಿಸಲಾಯಿತು.
ಶ್ರೀನಿವಾಸಪುರ ರಸ್ತೆಯ ನತ್ಯಾಜ್ಯ ನಿರ್ವಹಣೆ ಟಕದ ಸುತ್ತಮುತ್ತಲಿನ ರೈತರ ಹೊಲಗಳಲ್ಲಿ ತ್ಯಾಜ್ಯ ಸುರಿಯುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ ಎಂದು ಪಳ್ಳಿಗರಪಾಳ್ಯ ಸದಸ್ಯ ಆರ್.ಶಂಕರಪ್ಪ ತಿಳಿಸಿದಾಗ, ಟಕದ ಕಾಂಪೌಂಡ್ ಕಾಮಗಾರಿ ನಡೆಯುತ್ತಿದ್ದು ನಂತರ ನಗರಸಭೆಯಿಂದಲೇ ಕಸವನ್ನು ಡಂಪಿಂಗ್ ಯಾರ್ಡ್‌ಗೆ ಸ್ಥಳಾಂತರಿಸಲಾಗುವುದು ಎಂದು ರಿಯಾಜ್ ಅಹ್ಮದ್ ತಿಳಿಸಿದರು.
ಬಿಇಒಗೆ ಸದಸ್ಯರ ತರಾಟೆ: ನಗರಸಭೆಯ ಸಾವಾನ್ಯ ಸಭೆಯಲ್ಲಿ ಶಿಕ್ಷಣ ಇಲಾಖೆ ಸಮಸ್ಯೆಗಳ ಬಗ್ಗೆ ವಿಶೇಷ ಚರ್ಚೆ ನಡೆಯುವ ವೇಳೆ ಬಿಇಒ ಡಿ.ಗಿರಿಜೇಶ್ವರಿದೇವಿ ಅವರ ನಡೆಗೆ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಖಾಸಗಿ ವಿದ್ಯಾಸಂಸ್ಥೆಗಳಲ್ಲಿ ಹೆಚ್ಚು ಶುಲ್ಕ ಪಡೆಯುತ್ತಾರೆ. ಬಿಇಒ ಖಾಸಗಿ ಶಾಲೆಗಳ ಪರ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಎಸ್.ವೈ.ರಾಜಶೇಖರ್, ಮಂಡಿಕಲ್ ರಾಜಣ್ಣ ಮತ್ತಿತರರು ಆರೋಪಿಸುತ್ತಿದ್ದಂತೆ ಬಿಇಒ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಲಾಕ್‌ಡೌನ್‌ನಲ್ಲಿ ಶಾಲೆಗಳ ಶುಲ್ಕವನ್ನು ಸರ್ಕಾರದ ನಿಯಮದಂತೆ ಪಡೆಯಬೇಕೆಂದು ಆದೇಶ ಹೊರಡಿಸಿ 24 ಲಕ್ಷ ರೂ. ಪಾಲಕರಿಗೆ ಉಳಿಸಿದ್ದೇನೆ. 4 ಸಾವಿರ ವಿದ್ಯಾರ್ಥಿಗಳು ಖಾಸಗಿ ಶಾಲೆಗಳಿಂದ ಸರ್ಕಾರಿ ಶಾಲೆಗಳಿಗೆ ದಾಖಲಾಗಿದ್ದಾರೆ ಎಂದು ವಿವರಿಸಿದರು.
ಗಿರಿಜೇಶ್ವರಿದೇವಿ ಅಧಿಕಾರ ವಹಿಸಿಕೊಂಡ ನಂತರ ಶಿಕ್ಷಕರಲ್ಲಿ ಗುಂಪುಗಾರಿಕೆ ಹೆಚ್ಚಾಗಿದೆ, ಸರ್ಕಾರಿ ಶಾಲೆ ಶಿಕ್ಷಕರು ಅವರ ಹಿಂದೆ ತಿರಿಗಾಡಿಕೊಂಡು ಶಾಸಕರನ್ನಾಗಿಸುವ ಕಾಯಕದಲ್ಲಿದ್ದಾರೆ ಎಂದು ಕೆಲ ಸದಸ್ಯರು ಆರೋಪಿಸಿದಾಗ ಸಿಟ್ಟಾದ ಬಿಇಒ ನನ್ನ ಮೇಲೆ ಕೇಸ್ ಹಾಕಿಕೊಳ್ಳಿ ಎಂದಾಗ ಕೆಲವರು ಇವರ ಮಾತಿಗೆ ವಿರೋಧ ವ್ಯಕ್ತಪಡಿಸಿದರು. ಶಾಸಕ ಎಚ್.ನಾಗೇಶ್ ಮಧ್ಯಪ್ರವೇಶಿಸಿ ಜನಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ತಕ್ಕ ಉತ್ತರ ನೀಡಬೇಕು ಎಂದು ಹೇಳಿ ವಿವಾದ ಅಂತ್ಯಗೊಳಿಸಿದರು.