ಸರ್ವೀಸ್ ರಸ್ತೆ ನಿರ್ಮಾಣಕ್ಕೆ ಒಪ್ಪಿಗೆ: ಕೇಂದ್ರ ಸಚಿವ ನಿತಿನ್ ಗಡ್ಕರಿ ಭರವಸೆ

Approval for construction of service road Mandya
Published on

ಮಂಡ್ಯ: ಶ್ರೀರಂಗಪಟ್ಟಣ-ಕುಶಾಲನಗರ ಹೆದ್ದಾರಿಗೆ ಸಂಬಂಧಿಸಿದಂತೆ ಸರ್ವೀಸ್ ರಸ್ತೆ ನಿರ್ಮಿಸಿಕೊಡಲು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಒಪ್ಪಿಗೆ ನೀಡಿದ್ದಾರೆ. ಇದರೊಂದಿಗೆ ಶ್ರೀರಂಗಪಟ್ಟಣ ತಾಲೂಕಿನ ರೈತರ ನಿಯೋಗದ ಭೇಟಿ ಫಲಪ್ರದವಾಗಿದೆ.

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ನೇತೃತ್ವದಲ್ಲಿ ದೆಹಲಿಯಲ್ಲಿ ನಿತಿನ್ ಗಡ್ಕರಿ ಅವರ ಗೃಹ ಕಚೇರಿಗೆ ಭೇಟಿ ನೀಡಲಾಗಿತ್ತು. ರಾಷ್ಟ್ರೀಯ ಹೆದ್ದಾರಿಯ ಎರಡು ಭಾಗಗಳಲ್ಲಿ ಸರ್ವೀಸ್ ರಸ್ತೆ ನಿರ್ಮಿಸಿಕೊಡಬೇಕು. ಒಂದು ವೇಳೆ ಹೆದ್ದಾರಿ ಪಕ್ಕದಲ್ಲಿ ಸರ್ವೀಸ್ ರಸ್ತೆ ಮಾಡಿಸದೇ ಹೋದಲ್ಲಿ ರೈತರು ತಮ್ಮ ಜಮೀನುಗಳಿಗೆ ತೆರಳಲು ಸಾಧ್ಯವಾಗುವುದಿಲ್ಲ. ಜತೆಗೆ ಬೆಳೆಗಳನ್ನು ಸಾಗಾಣಿಕೆ ಮಾಡಲು ಸಾಧ್ಯವಿಲ್ಲ. ಶ್ರೀರಂಗಪಟ್ಟಣ ಐತಿಹಾಸಿಕ ಪ್ರವಾಸಿ ತಾಣವಾಗಿರುವುದರಿಂದ ಸರ್ವೀಸ್ ರಸ್ತೆ ನಿರ್ಮಿಸಿಕೊಡುವಂತೆ ಎಚ್‌ಡಿಕೆ ಹಾಗೂ ರವೀಂದ್ರ ಶ್ರೀಕಂಠಯ್ಯ ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ ನಿತಿನ್ ಗಡ್ಕರಿ ಮನವಿಗೆ ಸ್ಪಂದಿಸಿ, ಹೆದ್ದಾರಿಯ ಎರಡು ಭಾಗಗಳಲ್ಲಿ ಎತ್ತರದ ತಡೆಗೋಡೆಗಳು ನಿರ್ಮಾಣವಾಗುತ್ತಿರುವುದರಿಂದ ಸರ್ವೀಸ್ ರಸ್ತೆ ನಿರ್ಮಿಸಿಕೊಡಲು ಸಾಧ್ಯವಿಲ್ಲ. ಆದರೂ ಎಚ್‌ಡಿಕೆ ಅವರೇ ಖುದ್ದು ಆಗಮಿಸಿ ರೈತರ ಪರವಾಗಿ ಕೇಳುತ್ತಿರುವುದನ್ನು ಪರಿಗಣನೆಗೆ ತೆಗೆದುಕೊಂಡು ಹೆಚ್ಚುವರಿಯಾಗಿ ಅಗತ್ಯ ಹಣ ಬಿಡುಗಡೆ ಮಾಡಿ ಸರ್ವೀಸ್ ರಸ್ತೆ ಮಾಡಿಕೊಂಡುವುದಾಗಿ ಭರವಸೆ ನೀಡಿದರು. ಇದಕ್ಕೆ ಹರ್ಷವ್ಯಕ್ತಪಡಿಸಿದ ರೈತರು, ಮೂವರಿಗೂ ಅಭಿನಂದನೆ ಸಲ್ಲಿಸಿದರು.

ಗ್ರಾಮ ಪಂಚಾಯಿತಿ ಸದಸ್ಯ ರಾಮಕೃಷ್ಣ ಮಾತನಾಡಿ, ರವೀಂದ್ರ ಶ್ರೀಕಂಠಯ್ಯ ಮಾತು ಕೊಟ್ಟಂತೆ 20ಕ್ಕೂ ಹೆಚ್ಚು ರೈತರ ನಿಯೋಗವನ್ನ ದೆಹಲಿಗೆ ಕರೆತಂದು ಎಚ್.ಡಿ.ಕುಮಾರಸ್ವಾಮಿ ಅವರನ್ನ ಭೇಟಿ ಮಾಡಿಸಿದ್ದಾರೆ. ನಮ್ಮನ್ನು ಗೌರವಯುತವಾಗಿ ನಡೆಸಿಕೊಳ್ಳಲಾಯಿತು. ನಂತರ ನಿತಿನ್ ಗಡ್ಕರಿ ಅವರನ್ನ ಭೇಟಿ ಮಾಡಿಸಿ ಸಮಸ್ಯೆ ಬಗೆಹರಿಸಿಕೊಟ್ಟಿದ್ದಾರೆ. ಇದಕ್ಕೆ ನಮ್ಮ ಭಾಗದ ರೈತರು ಸೇರಿದಂತೆ ಸಾರ್ವಜನಿಕರು ಆಭಾರಿಯಾಗಿದ್ದೇವೆ ಎಂದು ಹೇಳಿದರು.

ಪಾಲಹಳ್ಳಿ ಗ್ರಾಮದ ಡಾ.ಡಿ.ಎ.ಪ್ರಶಾಂತ್, ವೆಂಕಟೇಶ್, ರವಿ, ಎಂಪಿಸಿಎಸ್ ಅಧ್ಯಕ್ಷ ಲೋಕೇಶ್, ತಾಂಡು, ಸುನಿಲ್, ಚಂದನ್, ಸತ್ಯಪ್ಪ, ಸಾಯಿಕುಮಾರ್, ವೆಂಕಟೇಶ್, ಅಶ್ವಥನಾರಾಯಣ, ಲೋಕೇಶ್, ಪ್ರೀತಂ, ಪ್ರವೀಣ್, ರಾಕೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net