

ತರೀಕೆರೆ: ಅಮೃತ್ 2.0 ಯೋಜನೆಯಡಿ ಪುರಸಭೆ ವ್ಯಾಪ್ತಿಯ ಜಲಮೂಲ ಪುನಶ್ಚೇತನ, ಹಸಿರು ಜಾಗ ಹಾಗೂ ವಿವಿಧ ವಾರ್ಡ್‌ಗಳಲ್ಲಿ ಉದ್ಯಾನವನಗಳ ಅಭಿವೃದ್ಧಿ ಕಾಮಗಾರಿಗಳಿಗೆ ಅನುಮೋದನೆ ದೊರಕಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್ ತಿಳಿಸಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಏರ್ಪಡಿಸಿದ್ದ ಸರ್ವ ಸದಸ್ಯರ ವಿಶೇಷ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಜಲಮೂಲ ಪುನಶ್ಚೇತನಕ್ಕೆ ಪಟ್ಟಣದ ಇತಿಹಾಸ ಹಿನ್ನೆಲೆಯುಳ್ಳ ಚಿಕ್ಕೆರೆ, ದೊಡ್ಡಕರೆ ಹಾಗೂ ದಳವಾಯಿಕೆರೆ ಆಯ್ಕೆ ಮಾಡಿಕೊಳ್ಳಲಾಗಿದೆ. ಇನ್ನುಳಿದಂತೆ ವಿವಿಧ ವಾರ್ಡ್‌ಗಳಲ್ಲಿರುವ ಉದ್ಯಾನವನಗಳ ಪೈಕಿ 3 ಪಾರ್ಕ್ ಅಭಿವೃದ್ಧಿಗೆ ಗುರುತಿಸಲಾಗಿದೆ. ಕಾಮಗಾರಿ ಅನುಷ್ಠಾನಗೊಳಿಸಲು ಸರ್ವ ಸಮ್ಮತದ ಒಪ್ಪಿಗೆ ಅಗತ್ಯ ಎಂದರು.
ಮುಖ್ಯಾಧಿಕಾರಿ ಸಭೆಯಲ್ಲಿ ಮಂಡಿಸಿದ ವಿಷಯಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಆರ್.ಕುಮಾರಪ್ಪ, ಮೂರು ಕೆರೆಗಳ ಆಯ್ಕೆ ಸರಿಯಾಗಿದೆ. ಆದರೆ ಉದ್ಯಾನವನಗಳ ಆಯ್ಕೆಯಲ್ಲಿ ಲೋಪವಿದೆ. ಪಟ್ಟಣದ ಬಹುತೇಕ ಪಾರ್ಕ್‌ಗಳು ಅಭಿವದ್ಧಿಯಲ್ಲಿ ಹಿಂದೆ ಬಿದ್ದಿದ್ದರೂ ಖಾಸಗಿ ಪಾರ್ಕ್‌ಗಳನ್ನು ಆಯ್ಕೆ ಮಾಡಿರುವುದು ತಪ್ಪು. ಪುರಸಭೆ ಅಧಿಕಾರಿಗಳ ಆಯ್ಕೆ ವಿಧಾನ ಸರಿ ಇಲ್ಲದ ಕಾರಣ ಪುನರ್ ಪರಿಶೀಲಿಸಿ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದರು. ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇಂಜಿನಿಯರ್ ಶಿಲ್ಪ ಮಾತನಾಡಿ, ಅಮೃತ್ 2.0 ಯೋಜನೆಯಡಿ ಪಟ್ಟಣಕ್ಕೆ 247 ಕುಡಿಯುವ ನೀರು ಸರಬರಾಜು ಮಾಡುವ ಕಾಮಗಾರಿಗೆ ಈಗಾಗಲೇ ಪುರಸಭೆ ಅನುಮತಿ ನೀಡಿದೆ. ಅದರನ್ವಯ ಕಾಮಗಾರಿ ಆರಂಭಿಸಲು ಕ್ರಮವಹಿಸಲಾಗಿದ್ದು, ಆಡಳಿತ ಮಂಡಳಿ ಸಹಕಾರ ಅಗತ್ಯ ಎಂದರು.
ಸದಸ್ಯ ಟಿ.ಜಿ.ಅಶೋಕ್‌ಕುಮಾರ್ ಮಾತನಾಡಿ, ಅಮೃತ್ 2.0 ಯೋಜನೆಗೆ ಪುರಸಭೆಯಿಂದ ನಗರ ನೀರು ಮತ್ತು ಒಳ ಚರಂಡಿ ಮಂಡಳಿಗೆ ಪಾವತಿಸಬೇಕಾದ ವಂತಿಕೆ ಹಣ ಅಧಿಕವಾಗಿರುವುದರಿಂದ ಪಾವತಿ ಕಷ್ಟವಾಗಲಿದೆ. ಬೇರೆ,ಬೇರೆ ಮೂಲಗಳಿಂದ ವಂತಿಕೆ ಸರಿದೂಗಿಸಿ ಪುರಸಭೆಗೆ ಆಗುವ ಹೊರೆ ತಪ್ಪಿಸಬೇಕು ಎಂದು ಮನವಿ ಮಾಡಿದರು.
ಉಪಾಧ್ಯಕ್ಷೆ ಎಂ.ಗಿರಿಜಾ, ಸದಸ್ಯರಾದ ಟಿ.ದಾದಾಪೀರ್, ಟಿ.ಜೆ.ಲೋಕೇಶ್ ಇತರರಿದ್ದರು.