ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನ, ಅಧಿಕಾರ

cong dr sharanprakash patil
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಶ್ರಮಿಸಿದ ಕಾರ್ಯಕರ್ತರಿಗೆ ನಿಗಮ-ಮಂಡಳಿಗಳಲ್ಲಿ ಸೂಕ್ತ ಸ್ಥಾನಮಾನ, ಅಧಿಕಾರ ನೀಡಲಾಗುವುದು. ಈ ನಿಟ್ಟಿನಲ್ಲಿ ಕಾಂಗ್ರೆಸ್ ನಡಿಗೆ-ಕಾರ್ಯಕರ್ತರ ಕಡೆಗೆ ಅಭಿಯಾನ ಆರಂಭಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಹೇಳಿದರು.

ಇಲ್ಲಿಯ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮಂಗಳವಾರ ಭೇಟಿ ನೀಡಿದ ಸಂದರ್ಭದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ನಿಗಮ-ಮಂಡಳಿಗಳಲ್ಲಿ ಕಾರ್ಯಕರ್ತರಿಗೆ ಸ್ಥಾನಮಾನ ನೀಡಲು ಪಟ್ಟಿ ತಯಾರಿಸಿದ್ದೇವೆ. ಮುಂಬರುವ ಜಿಪಂ, ತಾಪಂ ಚುನಾವಣೆಯಲ್ಲೂ ಪಕ್ಷದ ಕಾರ್ಯಕರ್ತರಿಗೆ ಟಿಕೆಟ್ ಸಿಗುವಂತೆ ಪ್ರಯತ್ನ ಮಾಡೋಣ ಎಂದರು.

ಮಲ್ಲಿಕಾರ್ಜುನ ಖರ್ಗೆ ಅವರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಇಂದು ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಡಿ.ಕೆ. ಶಿವಕುಮಾರ ಅವರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಇಂದು ರಾಜ್ಯದ ಉಪ ಮುಖ್ಯಮಂತ್ರಿಯಾಗಿದ್ದಾರೆ. ನಾನು ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಇಂದು ಸಚಿವನಾಗಿದ್ದೇನೆ. ಇದು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಸಾಧ್ಯ. ಸಮಯ ಬಂದಾಗ ಕೆಳ ಮಟ್ಟದ ಕಾರ್ಯಕರ್ತರಿಗೂ ಪಕ್ಷ ಅಧಿಕಾರ ನೀಡಿದೆ ಎಂದು ಹೇಳಿದರು.

ಜನಸಾಮಾನ್ಯರು, ಬಡವರ ಬದುಕಿನಲ್ಲಿ ಬದಲಾವಣೆ ತರುವುದೇ ಕಾಂಗ್ರೆಸ್​ನ ಮೂಲ ಸಿದ್ಧಾಂತ. ಅಧಿಕಾರದಲ್ಲಿದ್ದಾಗ ಅನೇಕ ಕಾರ್ಯಕ್ರಮ, ಕಾನೂನುಗಳ ಮೂಲಕ ಬಡವರಿಗೆ ಅನುಕೂಲ ಮಾಡಿದೆ. ಅಧಿಕಾರ ಇಲ್ಲದಾಗ ವಿರೋಧ ಪಕ್ಷವಾಗಿ ಬಡವರ ಪರವಾಗಿ ಹೋರಾಟ ಮಾಡಿದೆ. ಕಾಂಗ್ರೆಸ್ ರಾಜಕೀಯ ಸ್ಥಾನಮಾನ, ಅಧಿಕಾರಕ್ಕಾಗಿ ಹುಟ್ಟಿದ ಪಕ್ಷವಲ್ಲ. ಅಧಿಕಾರ ಇರಲಿ, ಇಲ್ಲದಿರಲಿ ಎಲ್ಲ ಜಾತಿ, ಧರ್ಮದವರಿಗೆ ಕೆಲಸ ಮಾಡಿದೆ ಎಂದರು.

ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಕಿತ್ತೂ ಸ್ವಾಗತಿಸಿದರು. ಅಬ್ದುನಗನಿ ವಲಿ ಅಹ್ಮದ್ ನಿರ್ವಹಿಸಿದರು. ಹೆಸ್ಕಾಂ ಅಧ್ಯಕ್ಷ ಅಜೀಮ್ೕರ ಖಾದ್ರಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಲ್ತಾಫ್ ಕಿತ್ತೂರ, ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲಕುಮಾರ ಪಾಟೀಲ, ಪಾಲಿಕೆ ಸದಸ್ಯರಾದ ಪ್ರಕಾಶ ಕುರಹಟ್ಟಿ, ಇಕ್ಬಾಲ ನವಲೂರ, ಅರ್ಜುನ ಪಾಟೀಲ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದೀಪಾ ಗೌರಿ, ಬಂಗಾರೇಶ ಹಿರೇಮಠ, ಡಿ.ಎಂ. ದೊಡಮನಿ, ಫರ್ವೆಜ ಕಟ್ಟಿಮನಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net