

ಬಂಗಾರಪೇಟೆ: ತಾಲೂಕಿನ ಪ್ರತಿ ಪಂಚಾಯಿತಿ ಮತ್ತು ಹೋಬಳಿ ಮಟ್ಟದಲ್ಲಿ ಕೃಷಿ ಉತ್ಪಾದನಾ ಸಂಘ ರಚನೆ ಮಾಡಿಕೊಂಡರೆ ಬೆಳೆಯುವ ಬೆಳೆಗಳಿಗೆ ಸೂಕ್ತ ಬೆಲೆ ನಿಗದಿ ಪಡಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.
ತಾಲೂಕಿನ ಖಾಸಗಿ ಕಲ್ಯಾಣ ಮಂಟಪದಲ್ಲಿ ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲ ಬ್ಯೂರೋ ಮತ್ತು ಕೃಷಿ ವಿಜ್ಞಾನ ಕೇಂದ್ರದಿಂದ ಎಸ್ಸಿ,ಎಸ್ಟಿ ಜನಾಂಗ ಉಪ ಯೋಜನೆಯಡಿ ಹಮ್ಮಿಕೊಂಡಿದ್ದ ಜೈವಿಕ ಕೀಟ ನಿಯಂತ್ರಣ ಕ್ಷೇತ್ರೋತ್ಸವದಲ್ಲಿ ಮಾತನಾಡಿದ ಅವರು, ರೈತರಿಗೆ ಅವಶ್ಯಕತೆ ಇರುವ ಸುಮಾರು 12 ಸಾವಿರ ಮೌಲ್ಯದ ಸಾಮಗ್ರಿಗಳನ್ನು ವಿತರಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಆಯಾ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡು ರೈತರಿಗೆ ಸಹಕಾರ ನೀಡಲಾಗುವುದು ಎಂದರು.
ಕೇಂದ್ರ ಸರ್ಕಾರ ರೈತರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಚಾಲ್ತಿಯಲ್ಲಿದೆ. ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಾಣಿಕೆ ಮಾಡಲು ಅಗತ್ಯ ವಸ್ತುಗಳ ಮೇಲೆ ಬೆಲೆ ಏರಿಸಿ ರೈತರ, ಜನಸಾಮಾನ್ಯರ ಆರ್ಥಿಕ ಪರಿಸ್ಥಿತಿ ಮೇಲೆ ಪರಿಣಾಮ ಉಂಟುಮಾಡಿಸುತ್ತಿದೆ ಎಂದು ಆರೋಪಿಸಿದರು.
ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ, ಜನರಿಗೆ ನೂರು ರೂ. ಕೊಟ್ಟು ಬೆಲೆ ಏರಿಕೆ ಹೆಸರಿನಲ್ಲಿ ಸಾವಿರ ರೂಪಾಯಿ ಕಿತ್ತುಕೊಳ್ಳುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಅವರಿಗೆ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ ಹಣವನ್ನು ಗ್ಯಾರೆಂಟಿಗೆ ಉಪಯೋಗಿಸಿತ್ತಿದೆ. ರಾಜ್ಯದಲ್ಲಿ ಅಭಿವೃದ್ಧಿ ಕುಂಟಿತಗೊಂಡಿದೆ. ಕೇಂದ್ರ ಸರ್ಕಾರ ದಿಂದ ಬರುತ್ತಿರುವ ಯೋಜನೆಗಳನ್ನೇ ತಮ್ಮ ಸರ್ಕಾರದ ಯೋಜನೆಗಳೆಂದು ಕಾಂಗ್ರೆಸ್ ಸರ್ಕಾರ ಬಿಂಬಿಸಿಕೊಳ್ಳುತ್ತಿದೆ ಎಂದರು.
ದೇಶದ ಎಲ್ಲ ರಾಜ್ಯಗಳಲ್ಲಿ ರಸಗೊಬ್ಬರದ ಕೊರತೆಯಿಲ್ಲ. ಇಲ್ಲಿ ಮಾತ್ರ ರಸಗೊಬ್ಬರ ಕೊರತೆ ಉಂಟಾಗುತ್ತಿದೆ ಎಂದು ಹೇಳಿ ಕೇಂದ್ರದ ಮೇಲೆ ರಾಜ್ಯ ಸರ್ಕಾರ ದೂರುತ್ತಿದೆ. ಈ ಹಿಂದೆ ಖಾಸಗಿ ಪ್ಯಾಕ್ಟರಿಗಳಿಗೆ ರಸಗೊಬ್ಬರ ವಿತರಣೆ ಜವಾಬ್ದಾರಿ ನೀಡಲಾಗಿತ್ತು. ಮೋದಿ ಪ್ರಧಾನಿ ಆದ ನಂತರ ಖಾಸಗಿ ಪ್ಯಾಕ್ಟರಿಗಳಿಂದ ತೆಗೆದು ಸಬ್ಸಿಡಿ ದರದಲ್ಲಿ ರೈತರಿಗೆ ರಸಗೊಬ್ಬರ ನೀಡುತ್ತಿದೆ ಎಂದರು.
ವಿಜ್ಞಾನಿಗಳಾದ ಸಿ.ಮಂಜುನಾಥ, ಬಿ.ಎಸ್.ಮಂಜುನಾಥ, ಗುಂಡಪ್ಪ, ಸಾಗರ್, ಟಿ.ಪ್ರಭುಲಿಂಗ, ಲಾವಣ್ಯ, ಶಿಲ್ಪಾ, ಓಂಪ್ರಕಾಶ್ ನಾಯಕ್, ರಾಜಗೋಪಾಲ್, ಸ್ಥಳಿಯ ಮುಖಂಡರಾದ ಕಪಾಲಿ ಶಂಕರ್, ಹೂವರಿಸನಹಳ್ಳಿ ರಾಜಪ್ಪ, ಕಾರಹಳ್ಳಿ ನಾರಾಯಣಸ್ವಾಮಿ, ಹೊಸರಾಯಪ್ಪ ಇತರರು ಇದ್ದರು.