ದೂರಿನೊಂದಿಗೆ ಇರಲಿ ಸೂಕ್ತ ದಾಖಲೆ

Lokayukta
Published on

ಸಿದ್ದಾಪುರ: ಸ್ಥಳೀಯ ತಹಸೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಕಾರವಾರ ಲೋಕಾಯುಕ್ತ ಅಧಿಕಾರಿಗಳಿಂದ ಸಾರ್ವಜನಿಕರಿಗೆ ಮಾಹಿತಿ ಹಾಗೂ ಅಹವಾಲು ಸ್ವೀಕಾರ ಕಾರ್ಯಕ್ರಮ ಬುಧವಾರ ಜರುಗಿತು.

ಲೋಕಾಯುಕ್ತ ಎಸ್‌ಪಿ ಕುಮಾರ್ ಚಂದ್ರ ಮಾತನಾಡಿ, ಸಾರ್ವಜನಿಕರಿಗೆ ಮಾಹಿತಿ ಕೊರತೆಯಿಂದಾಗಿ ದೂರುಗಳು ಬರುತ್ತಿಲ್ಲ. ದೂರುಗಳು ಬರದೆ ಇರುವುದರಿಂದ ನಮಗೆ ಕ್ರಮ ಕೈಗೊಳ್ಳಲು ಆಗುತ್ತಿಲ್ಲ. ಎಲ್ಲ ಇಲಾಖೆಗಳು ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡಬೇಕು. ಸರ್ಕಾರಿ ಕಚೇರಿಗಳಲ್ಲಿ ಲೋಕಾಯುಕ್ತರ ವಿಳಾಸ ಹಾಗೂ ದೂರವಾಣಿ ಸಂಖ್ಯೆಗಳ ಬೋರ್ಡ್ ಹಾಕಬೇಕು. ಹಣಕಾಸು ರಿಜಿಸ್ಟರ್‌ಗಳನ್ನು ಓಪನ್ ಮಾಡಬೇಕು. ತೊಂದರೆಗೊಳಗಾದವರು ಸರಿಯಾದ ದಾಖಲೆಗಳೊಂದಿಗೆ ದೂರು ನೀಡಿದಲ್ಲಿ ಕಾನೂನು ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ ಎಂದರು.

ಲೋಕಾಯುಕ್ತ ಪಿಐ ವಾಸಮ್ ಅಹಮದ್ ಮಾತನಾಡಿ, ಲೋಕಾಯುಕ್ತ ಸಂಸ್ಥೆಯಿಂದ ಏನೇನು ಪ್ರಯೋಜನಗಳಿವೆ? ಸಾರ್ವಜನಿಕರಿಂದ ಅಧಿಕಾರಿಗಳು ಲಂಚ ಪಡೆದಾಗ ಯಾವ ರೀತಿ ಲೋಕಾಯುಕ್ತಕ್ಕೆ ದೂರು ನೀಡಬೇಕು. ಇಲಾಖೆಯಿಂದ ಪ್ರಯೋಜನ ಹೇಗೆ ಪಡೆದುಕೊಳ್ಳಬೇಕು ಎನ್ನುವುದರ ಕುರಿತು ಮಾಹಿತಿ ನೀಡಿದರು.

ಸಾರ್ವಜನಿಕರು ಕಂದಾಯ, ಶಿಕ್ಷಣ, ಅರಣ್ಯ, ಪಪಂ, ಹೆಸ್ಕಾಂ, ಸಾರಿಗೆ ಸೇರಿದಂತೆ ವಿವಿಧ ಇಲಾಖೆಗಳಿಂದಾಗುತ್ತಿರುವ ಸಮಸ್ಯೆಗಳ ಕುರಿತು ಅಹವಾಲು ಸಲ್ಲಿಸಿದರು. ಸಂಬಂಧಿತ ಇಲಾಖೆಗಳಿಗೆ ಮಾಹಿತಿ ನೀಡಿ ಸೂಕ್ತ ಕ್ರಮ ಕೈಗೊಳ್ಳಲಾಗವುದು ಎಂದು ಲೋಕಾಯುಕ್ತರು ತಿಳಿಸಿದರು. ತಹಸೀಲ್ದಾರ್ ಎಂ.ಆರ್. ಕುಲಕರ್ಣಿ, ತಾಪಂ ಇಒ ದೇವರಾಜ ಹಿತ್ತಲಕೊಪ್ಪ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net