ರೈತರಿಗೆ ಅನ್ಯಾಯವಾಗದಂತೆ ಸೂಕ್ತ ಕ್ರಮ

10 KURGODU 01
ಕುರುಗೋಡು ಸಮೀಪದ ಕುಡತಿನಿಯಲ್ಲಿ ಭೂಸಂತ್ರಸ್ತರ ಹೋರಾಟ ಸಮಿತಿ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಸಂಸದ ಈ. ತುಕಾರಾಮ್ ಮಾತನಾಡಿದರು. ಪ್ರಮುಖರಾದ ಸಂಪತ್‌ಕುಮಾರ್, ಜಂಗ್ಲಿಸಾಬ್, ಪ್ರತಾಪ್, ಮಂಜುನಾಥ, ನಾಗರಾಜ ಬಾಬು, ತಿಪ್ಪೇಸ್ವಾಮಿ ಇತರರಿದ್ದರು.
Published on

ಕುರುಗೋಡು: ಕುಡತಿನಿಯಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಭೂಸಂತ್ರಸ್ತರ ಹೋರಾಟ ಸಮಿತಿಯಿಂದ ಹಮ್ಮಿಕೊಂಡಿರುವ ಪ್ರತಿಭಟನೆ 966 ದಿನ ಪೂರೈಸಿದೆ.

ಪ್ರತಿಭಟನೆ ಸ್ಥಳಕ್ಕೆ ಸಂಸದ ಈ. ತುಕಾರಾಮ್ ಭೇಟಿ ನೀಡಿ, ಕುಡತಿನಿ, ಹರಗಿನದೋಣಿ, ವೇಣಿ ವೀರಾಪುರ, ಕೊಳಗಲ್ಲು ಜಾನೆಕುಂಟೆ, ಸಿದ್ದಮ್ಮನಹಳ್ಳಿ, ಎರ‌್ರಂಗಳ್ಳಿ ಗ್ರಾಮಗಳ ರೈತರು ಹರ್ಷಿಲ್ ಮಿತ್ತಲ್, ಎನ್.ಎಂ.ಡಿ.ಸಿ, ಬ್ರಾಹ್ಮಿಣಿ, ಮತ್ತು ಉತ್ತಮ್ ಗಾಲ್ವಾ ಕಂಪನಿ ಸ್ಥಾಪನೆಗೆ 12,875.04 ಎಕರೆ ಪ್ರದೇಶವನ್ನು ಕೆಐಡಿಬಿ ಮೂಲಕ ರೈತರಿಂದ ಬಲವಂತವಾಗಿ ಕಡಿಮೆ ಬೆಲೆಗೆ ಸ್ವಾಧೀನಪಡಿಸಿಕೊಳ್ಳಲಾಗಿದೆ. ಈವರೆಗೂ ಕಂಪನಿ ಸ್ಥಾಪಿಸದೆ, ಭೂಮಿ ವಾಪಸ್ ನೀಡದೆ, ಉದ್ಯೋಗ ಭತ್ಯೆ ನೀಡದೆ ವಂಚಿಸಲಾಗಿದೆ ಎಂದು ದೂರಿದರು.

ಸಮಸ್ಯೆ ಕುರಿತು ಅನೇಕ ಬಾರಿ ಸರ್ಕಾರದ ಗಮನಕ್ಕೆ ತರಲಾಗಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಎಂ.ಬಿ. ಪಾಟೀಲ್ ಅವರನ್ನು ಭೇಟಿ ಮಾಡಿ ಪರಿಹಾರ ಕಂಡುಕೊಳ್ಳಲು ಯತ್ನಿಸಲಾಗುವುದು. ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯ ಆಗುವುದಕ್ಕೆ ಬಿಡದೆ ಸರ್ಕಾರದ ಮೇಲೆ ಒತ್ತಡ ತಂದು ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ಕರ್ನಾಟಕ ಪ್ರಾಂತ ರೈತಸಂಘದ ಕಾರ್ಯದರ್ಶಿ ಯು.ಬಸವರಾಜ ಮಾತನಾಡಿ, ಸರ್ಕಾರದ ಜತೆಗೆ ಗಟ್ಟಿಯಾಗಿ ಮಾತನಾಡಿ ರೈತರಿಗೆ ನ್ಯಾಯ ಒದಗಿಸಿ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net