

ಜಿ.ನಾಗರಾಜ್ ಬೂದಿಕೋಟೆ
ಡಿಸಿಸಿ ಬ್ಯಾಂಕಿನ ಚುನಾವಣೆ ಜತೆಗೆ ಕಾಂಗ್ರೆಸ್ ನಾಯಕರ ನಡುವಿನ ಮುಸುಕಿನ ಗುದ್ದಾಟದಿಂದ ಮಹಿಳಾ ಸಂಘಗಳ ಸದಸ್ಯರಿಗೆ 10 ತಿಂಗಳಿಂದ ಸಾಲ&ಸೌಲಭ್ಯ ದೊರಕುತ್ತಿಲ್ಲ. ಈ ಕಾಲಹರಣದಿಂದ ಸಾಲ ಸಿಗುತ್ತದೆಯೋ, ಇಲ್ಲವೋ ಎಂಬ ಅನುಮಾನ ಸಂಘದ ಸದಸ್ಯರನ್ನು ಕಾಡುತ್ತಿದೆ.
ಬಂಗಾರಪೇಟೆ ತಾಲೂಕಿನ ಡಿಸಿಸಿ ಬ್ಯಾಂಕಿನ ವ್ಯಾಪ್ತಿಯಲ್ಲಿ 14 ವ್ಯವಸಾಯ ಸೇವಾ ಸಹಕಾರ ಸಂಘಗಳಿವೆ. ಇವುಗಳ ಮೂಲಕವೇ ರೈತರಿಗೆ ಮತ್ತು ಮಹಿಳಾ ಸಂಘಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಡಿಸಿಸಿ ಬ್ಯಾಂಕಿನಿಂದ ಸಾಲ ವಿತರಿಸಲಾಗುತ್ತಿದೆ. 5 ವರ್ಷಗಳಲ್ಲಿ 1,530ಕ್ಕೂ ಹೆಚ್ಚಿನ ಮಹಿಳಾ ಸಂಘಗಳಿಗೆ ಮತ್ತು ಸುಮಾರು 3,147 ರೈತರಿಗೆ ಕೃಷಿ ಸಾಲ ಸೇರಿ ಒಟ್ಟು 200 ಕೋಟಿ ರೂ. ಸಾಲ ನೀಡಲಾಗಿತ್ತು. ಸಾಲ ಪಡೆದ ಫಲಾನುಭವಿಗಳು ಸೌಲಭ್ಯವನ್ನು ಸದ್ಬಳಸಿಕೊಂಡು ಸಕಾಲಕ್ಕೆ ಮರುಪಾವತಿ ಮಾಡುವ ಮೂಲಕ ಬ್ಯಾಂಕಿನ ಅಭಿವೃದ್ಧಿಗೆ ಶ್ರಮಿಸಿದ್ದರು. ಆದರೆ, ಪ್ರಸ್ತುತ ಸಾಲಕ್ಕೆ ಅರ್ಜಿ ಸಲ್ಲಿಸಿದವರಿಗೆ 10 ತಿಂಗಳಿಂದ ಡಿಸಿಸಿ ಬ್ಯಾಂಕಿನಿಂದ ಸಾಲ ಸಿಗದ ಕಾರಣ ಸಂಘದ ಸದಸ್ಯರು ಸಮಸ್ಯೆ ಎದುರಿಸುವಂತಾಗಿದೆ.
ಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿಯ ಅವಧಿ ಪೂರ್ಣಗೊಂಡಿದ್ದು, ನೂತನ ಆಡಳಿತ ಮಂಡಳಿಯ ಆಯ್ಕೆಗೆ 10 ತಿಂಗಳ ಹಿಂದೆಯೇ ಚುನಾವಣೆ ನಡೆಯಬೇಕಿತ್ತು. ಆದರೆ, ಒಂದು ಬಣದ ಸದಸ್ಯರು ಚುನಾವಣೆ ನಡೆಸಲು ಅವಕಾಶ ನೀಡದೆ ಕಾಲಹರಣ ಮಾಡುತ್ತಿರುವುದರಿಂದ ಮತ್ತೊಂದು ಬಣ ಹೈಕೋರ್ಟ್ ಮೆಟ್ಟಿಲೇರಿ ಶೀಘ್ರ ಚುನಾವಣೆ ನಡೆಸಲು ಒತ್ತಡ ಹೇರುತ್ತಿದೆ. ಇದರ ಮಧ್ಯೆ ಲೆಕ್ಕ ಪರಿಶೋಧನೆಯಲ್ಲಿ ಅವ್ಯವಹಾರ ನಡೆದಿದ್ದು, ಅದರ ಮರು ಲೆಕ್ಕಪರಿಶೋಧನೆ ನಡೆಸಬೇಕೆಂದು ವಿರೋಧಿ ಗುಂಪು ಒತ್ತಾಯ ಮಾಡುತ್ತಿದೆ. ಬ್ಯಾಂಕಿನಲ್ಲಿ ಇಷ್ಟೆಲ್ಲ ಮುಸುಕಿನ ಗುದ್ದಾಟ ನಡೆಯುತ್ತಿರುವ ಜತೆಗೆ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗುವವರೆಗೂ ರೈತರಿಗೆ ಮತ್ತು ಮಹಿಳೆಯರಿಗೆ ಸಾಲ ಸೌಲಭ್ಯ ಸಿಗುವುದು ಅನುಮಾನ ಎನ್ನಲಾಗಿದೆ.
ಖಾಸಗಿಯವರ ಮೊರೆ: ಡಿಸಿಸಿ ಬ್ಯಾಂಕಿನಿಂದ ಈ ಹಿಂದೆ ಸಾಲ ಪಡೆದವರು ಕೃಷಿ ಸೇರಿ ಇತರ ಹಲವು ಚಟುವಟಿಕೆಗಳಿಗೆ ಬಳಕೆ ಮಾಡಿಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಜತೆಗೆ ಆರ್ಥಿಕ ಪ್ರಗತಿ ಕಾಣುತ್ತಿದ್ದರು. ಪಡೆದ ಸಾಲ ಸಕಾಲಕ್ಕೆ ಮರುಪಾವತಿ ಮಾಡಿ ಹೊಸ ಸಾಲ ಪಡೆದು ಮತ್ತಷ್ಟು ಪ್ರಗತಿ ಕಾಣಲು ಕನಸು ಕಂಡಿರುವವರಿಗೆ ಬ್ಯಾಂಕಿನವರು ತಣ್ಣೀರು ಎರಚುತ್ತಿದ್ದಾರೆ. ಇದರಿಂದಾಗಿ ಕೃಷಿ ಮತ್ತು ಇತರ ಚಟುವಟಿಕೆಗಳಿಗೆ ಖಾಸಗಿ ಸಾಲ ಸಂಸ್ಥೆಗಳ ಬಳಿ ಸಾಲಕ್ಕೆ ಮೊರೆ ಹೋಗಬೇಕಾದ ಅನಿವಾರ್ಯ ಎದುರಾಗಿದೆ.
ಡಿಸಿಸಿ ಬ್ಯಾಂಕಿನಿಂದ ಶೂನ್ಯ ಬಡ್ಡಿಯಲ್ಲಿ ಸಾಲ ಪಡೆದು ಹೈನುಗಾರಿಕೆಗೆ ಬಳಸಿಕೊಂಡು ಪಡೆದ ಸಾಲ ಮರುಪಾವತಿ ಮಾಡಲಾಗಿದೆ. ಈಗ ಹೊಸ ಸಾಲ ಕೇಳುತ್ತಿದ್ದರೆ ವಿತರಣೆ ಮಾಡಲು ಹಿಂದೇಟು ಹಾಕಲಾಗುತ್ತಿದೆ. ಇದರಿಂದ ಕೃಷಿ ಚಟುವಟಿಕೆ ಮತ್ತು ಹೈನುಗಾರಿಕೆಗೆ ಸಮಸ್ಯೆ ಉಂಟಾಗಿದೆ.
ಪಾರ್ವತಮ್ಮ ಗುಲ್ಲಹಳ್ಳಿ ಬಂಗಾರಪೇಟೆ ತಾಲೂಕಿನಲ್ಲಿ ಕಳೆದ ಸಾಲಿನಲ್ಲಿ 200 ಕೋಟಿ ರೂ.ಗಿಂತ ಹೆಚ್ಚಿನ ಸಾಲ ನೀಡುವ ಮೂಲಕ ರೈತರ ಕೃಷಿ ಚಟುವಟಿಕೆ ಜತೆಗೆ ಮಹಿಳೆಯರ ಆರ್ಥಿಕ ಪ್ರಗತಿಗೆ ಒತ್ತು ನೀಡಲಾಗಿತ್ತು. ಹಲವು ಕಾರಣಗಳಿಂದ ತಾಲೂಕಿನ ಜನತೆಗೆ ಸಾಲ ಸೌಲಭ್ಯ ವಿತರಣೆ ಮಾಡಲು ವಿಳಂಭವಾಗುತ್ತಿದೆ. ಸರ್ಕಾರ ಆದಷ್ಟು ಬೇಗ ಸಾಲ ವಿತರಣೆಗೆ ಹಸಿರು ನಿಶಾನೆ ತೋರಿಸಬೇಕು.ಪಿಚ್ಚಳ್ಳಿ ಗೋವಿಂದರಾಜುಲುಡಿಸಿಸಿ ಬ್ಯಾಂಕ್ ನಿರ್ದೇಶಕ ಬಂಗಾರಪೇಟೆ