ವಿದ್ಯಾರ್ಥಿಗಳ ಪ್ರತಿಭೆಗೆ ಗಣ್ಯರ ಮೆಚ್ಚುಗೆ

ಚಿತ್ರ 1ಎಸ್ ಡಿ ಪಿ 01
Published on


ಕೊಡಗು : ವಿರಾಜಪೇಟೆ ತಾಲೂಕಿನ ಚೆನ್ನಯ್ಯನ ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡಂಚಿನ ಚೆನ್ನಂಗಿ ಸರ್ಕಾರಿ ಶಾಲೆಯಲ್ಲಿ ಔಷಧ ಸಿಂಚನ ಎಂಬ ವಿನೂತನ ಕಾರ್ಯಕ್ರಮವನ್ನು ಸೋಮವಾರ ಅಯೋಜಿಸಲಾಗಿತ್ತು. ಔಷಧ ಗುಣಗಳುಳ್ಳ ಗಿಡಗಳನ್ನು ಪರಿಚಯಿಸುವ ಮೂಲಕ ಮಾದರಿಯಾದ ವಿದ್ಯಾರ್ಥಿಗಳ ಪ್ರತಿಭೆಗೆ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.


1 ರಿಂದ 7ನೇ ತರಗತಿಯ ಸುಮಾರು 50 ವಿದ್ಯಾರ್ಥಿಗಳು ಮನೆಯ ಸುತ್ತಮುತ್ತಲಿನಲ್ಲಿ ಬೆಳೆದು ನಿಂತ ಮರಕೆಸ, ಕಾಡು ಸಾಂಬಾರ, ಶುಂಠಿ, ಅಮೃತಬಳ್ಳಿ, ಕೊತ್ತಂಬರಿ, ಪುದೀನಾ, ನಿಂಬೆ, ಆಗಲಕಾಯಿ, ಕರಿಬೇವು, ತುಂಬೆ, ತುಳಸಿ, ಬಾಳೆ, ಸೀಬೆ, ದಾಳಿಂಬೆ, ನೇರಳೆ, ಕಾಚಿ ಪುಳಿ, ಬದನೆಕಾಯಿ, ಸಾಸುವೆ, ಈರುಳ್ಳಿ, ಬೆಳ್ಳುಳ್ಳಿ, ನೀಲಗಿರಿ, ಗಾಂಧಾರಿ ಮೆಣಸು, ಆಟಿ ಸೊಪ್ಪು, ಕಣಲೇ, ಕಾಮಕಸ್ತೂರಿ, ಗುಲಾಬಿ, ನಾಗದಾಳಿ, ದೊಡ್ಡಪತ್ರೆ, ಪಾಲಕ್ ಸೇರಿದಂತೆ ತರಕಾರಿ, ಹೂವು-ಹಣ್ಣು, ಗಿಡ ಮರಗಳ ಮಹತ್ವದ ಬಗ್ಗೆ ಪರಿಚಯಿಸಿದರು.


ಮನುಷ್ಯನ ಆರೋಗ್ಯಕ್ಕೆ ಅನುಗುಣವಾಗಿ ಗಿಡಮೂಲಿಕೆಗಳ ಪ್ರಯೋಜನಗಳ ಬಗ್ಗೆ ತಿಳಿಸಿಕೊಟ್ಟರು. ಉಪಯುಕ್ತ ಗಿಡಮರಗಳನ್ನು ಉಳಿಸಿ ಬೆಳೆಸುವುದರ ಮೂಲಕ ಆಯುರ್ವೇದ ಗಿಡಮೂಲಿಕೆಗಳ ಔಷಧ ಬಳಕೆಯೊಂದಿಗೆ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಮುಂದಾಗ ಬೇಕು ಎನ್ನುವ ಸಂದೇಶ ಸಾರಿದರು.


ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೇಕೆರಿರ ಅರುಣ್ ಕುಮಾರ್ ಮಾತನಾಡಿ, ಕಾಡಂಚಿನಲ್ಲಿರುವ ಚೆನ್ನಂಗಿ ಸರ್ಕಾರಿ ಶಾಲೆ ಇತ್ತೀಚಿನ ದಿನಗಳಲ್ಲಿ ಹಲವಾರು ವಿಶಿಷ್ಟ ವಿಭಿನ್ನ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಗಮನ ಸೆಳೆದಿದೆ. ಮಕ್ಕಳಿಗೆ ಕಲಿಕೆಗೆ ಪೂರಕವಾದ ಶಿಕ್ಷಣದೊಂದಿಗೆ ಪರಿಸರ ಶುಚಿತ್ವ ಆರೋಗ್ಯ ಸೇರಿದಂತೆ ಹಲವಾರು ವೃತ್ತಿ ಶಿಕ್ಷಣವು ನೀಡುತ್ತಿದ್ದಾರೆ. ಅದೆಷ್ಟು ಗಿಡಮರಗಳು ಬೆಳೆದು ನಿಂತರೂ ಅದರ ಮಹತ್ವ ತಿಳಿಯದೆ ಬಹುತೇಕರು ನಿರ್ಲಕ್ಷಿಸುತ್ತಿದ್ದಾರೆ ಎಂದರು.


ವಿದ್ಯಾರ್ಥಿಗಳು 50ಕ್ಕೂ ಹೆಚ್ಚು ಗಿಡಮೂಲಿಕೆಗಳ ಬಗ್ಗೆ ಪರಿಚಯಿಸುವುದರ ಮೂಲಕ ಅದರ ಮಹತ್ವ ತಿಳಿಸಿಕೊಟ್ಟಿದ್ದಾರೆ. ಚೆನ್ನಂಗಿ ಶಾಲೆಯ ಶಿಕ್ಷಕರು ಶಾಲೆಯ ಪಾಠಕ್ಕೆ ಮಾತ್ರ ಸೀಮಿತವಾಗದೆ ಕೃಷಿ, ಗಿಡಮೂಲಿಕೆಗಳು, ಪರಿಸರ, ಸ್ವಚ್ಛತೆ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ ಎಂದರು.


ವಿರಾಜಪೇಟೆ ತಾಲೂಕಿನ ಶಿಕ್ಷಣ ಸಂಯೋಜಕಿ ವಿಶಾಲಕ್ಷಿ ಮಾತನಾಡಿ, ಮುಖ್ಯ ಶಿಕ್ಷಕಿ ಕೆ.ಕೆ.ಸುಷ್ಮಾ ನೇತೃತ್ವದಲ್ಲಿ ಶಿಕ್ಷಕರ ಪರಿಶ್ರಮದಿಂದ ಮಕ್ಕಳು ಹೆಚ್ಚಿನ ದಾಖಲಾತಿಯ ಮೂಲಕ ಹಲವಾರು ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ಮಾದರಿಯಾಗಿದ್ದಾರೆ. ನಾವು ಯಾರಿಗೂ ಕಮ್ಮಿ ಇಲ್ಲ ಎಂಬಂತೆ ಶಾಲೆಯ ವಿದ್ಯಾರ್ಥಿಗಳು ಕಲಿಕೆ ವೃತ್ತಿ ಶಿಕ್ಷಣದೊಂದಿಗೆ ಆಸಕ್ತಿ ವಹಿಸಿ ಶಾಲೆಗೆ ತಪ್ಪದೆ ಹಾಜರಾಗುವ ಮೂಲಕ ಮಾದರಿಯಾಗಿದ್ದಾರೆ. ಬಹುತೇಕ ಜನರು ಹಳೆಯ ಪದ್ಧತಿ ಮರೆತು ರೆಡಿಮೇಡ್ ಫುಡ್‌ಗಳಿಗೆ ಆದಿತ್ಯ ನೀಡುತ್ತಿದ್ದಾರೆ. ಹೆಚ್ಚು ಕೆಮಿಕಲ್ ಬಳಕೆಯ ವಸ್ತುಗಳಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಹಳೆಯ ಪದ್ಧತಿಯಂತೆ ಹಣ್ಣು ತರಕಾರಿ, ಗಿಡಮೂಲಿಕೆ ಹೆಚ್ಚು ಬೆಳೆಸಿ ಉಪಯೋಗಿಸಿಕೊಳ್ಳುವುದರಿಂದ ಆರೋಗ್ಯ ಸುಧಾರಣೆಯಾಗಲಿದೆ ಎಂದರು.


ಶಾಲಾ ಮುಖ್ಯ ಶಿಕ್ಷಕಿ ಕೆ.ಕೆ.ಸುಷ್ಮಾ ಮಾತನಾಡಿ, ಪ್ರತಿ ತಿಂಗಳು ಶಾಲೆಯಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದ್ದು, ಮಕ್ಕಳ ಕಲಿಕೆಗೆ ಪೂರಕವಾದ ವಿಷಯಗಳನ್ನು ಮುಂದಿಟ್ಟುಕೊಂಡು ವೃತ್ತಿ ಶಿಕ್ಷಣವು ನೀಡಲಾಗುತ್ತಿದೆ. ಶಾಲೆಯ ಎಲ್ಲ ಕಾರ್ಯಕ್ರಮಗಳಿಗೆ ಪಾಲಕರು ಸಹಕಾರ ನೀಡುತ್ತಿದ್ದು, ದಾನಿಗಳು ಕೈಜೋಡಿಸುತ್ತಿದ್ದಾರೆ ಎಂದರು.


ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷೆ ಬೇಬಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಪ್ರತಿಮಾ, ಮಂಜುಳಾ, ಸತೀಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net