

ಮಂಡ್ಯ: ಕೋಟ್ಯಂತರ ಹಿಂದು ಭಕ್ತರ ಕನಸಾಗಿದ್ದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆ ಹಾಗೂ ಶ್ರೀರಾಮಚಂದ್ರ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಅತ್ಯಂತ ಯಶಸ್ವಿಯಾಗಿ ನಡೆದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಅಭಿನಂದನೆ ಸಲ್ಲಿಸಲು ಬಿಜೆಪಿ ಹಾಗೂ ಹಿಂದು ಸಂಘಟನೆ ಕಾರ್ಯಕರ್ತರು ಬುಧವಾರ ನಗರದಲ್ಲಿ ಪತ್ರ ಅಭಿಯಾನಕ್ಕೆ ಚಾಲನೆ ನೀಡಿದರು.
ಪ್ರಧಾನ ಅಂಚೆ ಕಚೇರಿ ಬಳಿ ಜಮಾಯಿಸಿದ ಕಾರ್ಯಕರ್ತರು, ಪತ್ರ ಬರೆದು ಪಿಎಂಗೆ ಕಳುಹಿಸಿದರು. ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ಮಾತನಾಡಿ, ಕೋಟ್ಯಂತರ ಭಕ್ತರ ಕನಸು ನನಸಾಗಿದೆ. ಈ ಮೂಲಕ ಹೋರಾಟ ಸಂಘರ್ಷಗಳಿಗೆ ಫಲ ಸಿಕ್ಕಿದೆ. ತಮ್ಮ ದಕ್ಷ ನೇತೃತ್ವ ಬದ್ಧತೆ, ಸಕಾಲಿಕ ನಿರ್ಣಯಗಳೇ ಇಂತಹ ಐತಿಹಾಸಿಕ ಯಶಸ್ಸಿಗೆ ಕಾರಣ. ಅದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸಲಾಗುತ್ತಿದೆ ಎಂದರು.
ಫೆ.14ರವರೆಗೂ ಅಭಿಯಾನ ಮುಂದುವರಿಯುತ್ತದೆ. ಸಮಾಜದ ಗಣ್ಯರು, ಮಠಾಧೀಶರು, ರಾಜ್ಯೋತ್ಸವ, ನಾಡೋಜ ಪುರಸ್ಕೃತರು, ಪದ್ಮಭೂಷಣ, ಪದ್ಮವಿಭೂಷಣ, ಖೇಲ್‌ರತ್ನ ವಿಜೇತರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಅಂತೆಯೇ ಪ್ರಧಾನಿ ನರೇಂದ್ರಮೋದಿ ಅವರಿಗೆ ಪತ್ರ ಬರೆಯುವ ಮೂಲಕ ಸಾರ್ವಜನಿಕರು ಹಾಗೂ ಗಣ್ಯರು ಸೇರಿದಂತೆ ಸಮಸ್ತ ಭಾರತೀಯರು ಅವರ ಕೈ ಬಲಪಡಿಸಲು ಅವರಿಗೆ ಪ್ರೋತ್ಸಾಹ ನೀಡಲು ಅಭಿಯಾನ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಿಂದ ಸುಮಾರು 10 ಸಾವಿರ ಪತ್ರ ಬರೆಯುವ ಗುರಿ ಹೊಂದಲಾಗಿದೆ ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿವೇಕ್, ಮುಖಂಡರಾದ ಹೊಸಹಳ್ಳಿ ಶಿವು, ಮಾದರಾಜೇ ಅರಸ್, ಶಿವಕುಮಾರ್, ಕೆಂಪಯ್ಯ, ಪ್ರಸನ್ನಕುಮಾರ್, ಮಹಾಂತಪ್ಪ, ಅಭಿಷೇಕ್, ನಂದೀಶ್, ಸುರೇಶ್ ಇತರರಿದ್ದರು.