ಮಂಡೆಕೋಲು ಗ್ರಂಥಾಲಯಕ್ಕೆ ಮುಖ್ಯ ಕಾರ್ಯದರ್ಶಿಯಿಂದ ಶ್ಲಾಘನೆ

sangeetha
ಮಂಡೆಕೋಲು ಗ್ರಂಥಾಲಯದಲ್ಲಿ ಸಂಗೀತ ಶಿಕ್ಷಣ ನೀಡುತ್ತಿರುವುದು.
Published on

ಸುಳ್ಯ: ವಿವಿಧ ಕಾರ್ಯಕ್ರಮ ಹಮ್ಮಿಕೊಂಡು ರಾಜ್ಯಾದ್ಯಂತ ಹೆಸರು ಮಾಡಿರುವ ತಾಲೂಕಿನ ಮಂಡೆಕೋಲು ಗ್ರಾಪಂನ ಗ್ರಂಥಾಲಯದ ಚಟುವಟಿಕೆಯನ್ನು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಂಡೆಕೋಲು ಗ್ರಂಥಾಲಯದಲ್ಲಿ ವಾರಾಂತ್ಯದಲ್ಲಿ ಸಂಗೀತ, ಯಕ್ಷಗಾನ ಹಾಗೂ ಇತರ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅಂತೆಯೇ ಸ್ವತಃ ವಿದ್ಯಾರ್ಥಿಯಾಗಿದ್ದುಕೊಂಡೇ ಸಣ್ಣ ಮಕ್ಕಳಿಗೆ ಸಂಗೀತಾಭ್ಯಾಸ ಮಾಡಿಸುತ್ತಿರುವ ಅಭಿಷೇಕ್ ಕಣೆಮರಡ್ಕ ಅವರ ವಿಡಿಯೋ ಕ್ಲಿಪ್ಪಿಂಗನ್ನು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಉಮಾಮಹದೇವನ್ ತಮ್ಮ ಎಕ್ಸ್(ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಡಿಯೋ ಹಂಚಿಕೊಂಡಿರುವ ಅವರು ‘ಎಷ್ಟೊಂದು ಸುಂದರ.., ಈ ಗ್ರಾಮೀಣ ಗ್ರಂಥಾಲಯದಲ್ಲಿ ನಡೆಯುವ ಸಂಗೀತ ತರಬೇತಿ’ ಎಂದು ಬರೆದುಕೊಂಡಿದ್ದಾರೆ. ಈಗಾಗಲೇ ಎರಡು ಸಾವಿರಕ್ಕೂ ಹೆಚ್ಚು ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.

ರಾಜ್ಯ ಹಾಗೂ ರಾಷ್ಟ್ರದ ಗಮನ ಸೆಳೆದ ‘ಅಮ್ಮನಿಗೊಂದು ಪುಸ್ತಕ’ ಎಂಬ ಕಾರ್ಯಕ್ರಮ ಇದೇ ಗ್ರಂಥಾಲಯದ ಗ್ರಂಥಪಾಲಕಿ ಸಾವಿತ್ರಿರಾಮ್ ಕಣೆಮರಡ್ಕ ಮೊದಲಾಗಿ ಪ್ರಾರಂಭಿಸಿದ್ದು, ಬಳಿಕ ಅದೇ ಕಾರ್ಯಕ್ರಮವನ್ನು ರಾಜ್ಯವ್ಯಾಪಿ ಅಳವಡಿಸಬೇಕೆಂದು ಸರ್ಕಾರ ಸುತ್ತೋಲೆ ಹೊರಡಿಸಿದ್ದನ್ನು ಇಲ್ಲಿ ನೆನಪಿಸಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net