

ಮಧುಗಿರಿ: ಕರೊನಾ ಸಂಕಷ್ಟದಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ವಿನೂತನ ಯೋಜನೆ ವಿದ್ಯಾಗಮಕ್ಕೆ ದೇಶದ ಬಹುತೇಕ ರಾಜ್ಯಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರವೂ ಪ್ರಶಂಸೆ ವ್ಯಕ್ತಪಡಿಸಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಶಾಲಾ ಶಿಕ್ಷಣದ ಸಹ ನಿರ್ದೇಶಕ ಎನ್.ಕೆಂಚೇಗೌಡ ತಿಳಿಸಿದರು.
ಶಿರಾ, ಮಧುಗಿರಿ, ಪಾವಗಡ ಮತ್ತು ಕೊರಟಗೆರೆ ತಾಲೂಕುಗಳ ಅಧಿಕಾರಿಗಳೊಂದಿಗೆ ಮಂಗಳವಾರ ವಿದ್ಯಾಗಮ ಕಾರ್ಯಕ್ರಮದ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು. ವಿದ್ಯಾಗಮ ಮಾದರಿ ಯೋಜನೆಯಾಗಿದ್ದು, ಮಕ್ಕಳ ಗುಣಾತ್ಮಕ ಶಿಕ್ಷಣದ ಕಲಿಕೆಗೆ ಸಹಕಾರಿಯಾಗಿದೆ. ಕರೊನಾದಿಂದ ಶಾಲೆಗಳು ಆರಂಭವಾಗಲು ವಿಳಂಬವಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಶಿಕ್ಷಣದಿಂದ ವಿಮುಖರಾಗಬಾರದೆಂಬ ಉದ್ದೇಶದಿಂದ ವಿದ್ಯಾಗಮ ಯೋಜನೆ ಜಾರಿಗೆ ಸರ್ಕಾರ ಕ್ರಮ ಕೈಗೊಂಡಿದ್ದು, ಅಭೂತಪೂರ್ವ ಬೆಂಬಲ ದೊರೆತಿದೆ. ಯೋಜನೆಯನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲು ಅಧಿಕಾರಿಗಳು ಶ್ರಮಿಸಬೇಕು ಎಂದರು.
16 ಅಧಿಕಾರಿಗಳ ತಂಡದೊಂದಿಗೆ ತಾಲೂಕಿನ 16 ವಿದ್ಯಾಗಮ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಸಹಾಯಕ ನಿರ್ದೇಶಕರು, ಶಿಕ್ಷಕರು ಕೈಗೊಂಡಿರುವ ಕಲಿಕಾ ಚಟುವಟಿಕೆಗಳು ಮತ್ತು ಮಕ್ಕಳ ಕಲಿಕೆ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ವಿದ್ಯಾಗಮ ನಡೆಸುವ ವಠಾರ, ದೇವಸ್ಥಾನದ ಆವರಣಗಳಲ್ಲಿ ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡಿ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ವಹಿಸಬೇಕು ಎಂದು ಶಿಕ್ಷಕರಿಗೆ ಸೂಚಿಸಬೇಕು ಎಂದರು. ಕ್ಷೇತ್ರ ಸಮನ್ವಯಾಧಿಕಾರಿಗಳು, ಡಿಡಿಪಿಐ ಕಚೇರಿಯ ವಿಷಯ ಪರಿವೀಕ್ಷಕರು, ಎಪಿಸಿ, ಡಯಟ್ ಉಪನ್ಯಾಸಕರು ಇದ್ದರು.